ಕಲಬುರಗಿ: ದೇಶದ ಜನರನ್ನು ಕಿತ್ತು ತಿನ್ನುತ್ತಿರುವ ಬೆಲೆಏರಿಕೆ, ನಿರುದ್ಯೋಗ, ಬಡತನ, ಭ್ರಷ್ಟಾಚಾರ, ,ಮಹಿಳೆಯರ ಮೇಲಿನ ಅತ್ಯಾಚಾರ, ರೈತರ ಆತ್ಮಹತ್ಯೆ, ಆರ್ಥಿಕ ಬಿಕ್ಕಟ್ಟು ಹತ್ತು ಹಲವು ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಮೂಲಕಾರಣವೆಂದು ಎಸ್.ಯು.ಸಿ.ಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಎಚ್.ವಿ.ದಿವಾಕರ ರವರು ಹೇಳಿದರು.
ಸಂಘಟನೆಗಳ ನೇತೃತ್ವದಲ್ಲಿ ಶಹಾಬಾದ ನಗರದಲ್ಲಿ ಜರುಗಿದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಯಾದ ನೇತಾಜಿ ಸುಭಾಷಚಂದ್ರ ಬೋಸ್‌ವರ ೧೨೩ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ ದರು. ಮುಂದುವರೆದು ಮಾತನಾಡಿದ ಅವರು ದೇಶದಲ್ಲಿ ಇಂದು ಆತಂಕದ ಪರಿಸ್ಥಿತಿ ಇದ್ದು ಜನರ ಜೀವನವು ಯಾತಾನಮಯವಾಗಿದೆ. ಟಾಟಾ, ಬಿರ್ಲಾ, ಅಂಬಾನಿ, ಆದಾನಿಗಳಂತಹ ಬಂಡವಾಳಶಾಹಿಗಳ ಕಪಿಮುಷ್ಟಿಯಲ್ಲಿರುವ ಎಲ್ಲಾ ಸರಕಾರಗಳು, ಕಳೆದ ೭೨ ವರ್ಷಗಳಿಂದಲೂ ದೇಶದ ಜನರನ್ನು ಮೋಸ ಮಾಡುತ್ತಲೇ ದೇಶವನ್ನು ದಿವಾಳಿ ಎಬ್ಬಿಸಿವೇ ಎಂದು ಆರೋಪಿಸಿದರು. ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು ಭಾರತೀಯರನ್ನು ಶೋಷಣೆ ಮಾಡುತ್ತಿದ್ದರು. ಆದರೆ ಇಂದು ನಮ್ಮನ್ನು ಆಳುವ ನಮ್ಮವರೇ ಶೋಷಣೆ ಮಾಡುತ್ತಿರುವುದು ಶೋಚನಿಯ ಎಂದರು.
ನಮ್ಮನ್ನು ಆಳುವ ಸರಕಾರಗಳು ಜನರಿಗೆ ಶುದ್ದವಾದ ಕುಡಿಯುವ ನೀರು, ಉತ್ತಮವಾದ ಆರೋಗ್ಯ, ಶಿಕ್ಷಣವನ್ನು ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ನುಡಿದ ಅವರು ಕಳೆದ ಹಲವು ವರ್ಷಗಳಿಂದ ದೇಶಕ್ಕೆ ಅನ್ನ ಕೊಡುವ ನಮ್ಮ ಸಾವಿರಾರು ರೈತರು ಆತ್ಮಹತ್ಯೆ ಮಾಡುಕೊಳ್ಳತ್ತಿದ್ದಾರೆ. ಉನ್ನತ ಶಿಕ್ಷಣ ಪಡೆದ ನಮ್ಮ ವಿದ್ಯಾರ್ಥಿ-ಯುವಜನರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಬೀದಿ ಬೀದಿ ಸುತ್ತುತ್ತಿರುವ ಪರಿಸ್ಥಿತಿ ನಿರ್ಮಾಣ ಮಾಡಿರುವುದೆಯಲ್ಲದೆ, ಅವರ ನೈತಿಕ ಬೆನ್ನೆಲುಬನ್ನು ಮುರಿಯಲು ಆಶ್ಲೀಲ ಸಿನಿಮಾ ಸಾಹಿತ್ಯವನ್ನು ಅಡೆತಡೆಯಿಲ್ಲದೆ ಪ್ರಸಾರ ಮಾಡುತ್ತಿದ್ದಾರೆ. ಇದರಲ್ಲಿ ಮುಳುಗಿರುವ ನಮ್ಮ ವಿದ್ಯಾರ್ಥಿ-ಯುವಜನರು ತಮ್ಮ ಸಮಸ್ಯೆಗಳಿಗೆ ಮೂಲಕಾರಣವನ್ನು ಹುಡುಕುವಲ್ಲಿ ವಿಫಲರಾಗಿ ಮಾನಸಿಕ ರೋಗಿಗಳಾಗುತ್ತಿದ್ದಾರೆ ಎಂದು ಆಂತಕ ವ್ಯಕ್ತಪಡಿಸಿದರು.
ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿದ ನೇತಾಜಿ ಸುಭಾಷ ಚಂದ್ರ ಬೋಸ್ ರವರ ಕನಸು ಕನಸಾಗಿದೆ ಉಳಿದಿದೆ. ನೇತಾಜಿ, ಭಗತಸಿಂಗ್, ಆಶ್ಫಾಖುಲ್ಲಾ ಖಾನ್ ಮುಂತಾದ ಕ್ರಾಂತಿಕಾರಿಗಳು ಸ್ವತಂತ್ರ ಭಾರತದಲ್ಲಿ ಶೋಷಣೆರಹಿತ ಹಾಗೂ ಸಮಾನತೆಯ ಸಮಾಜವನ್ನು ತರಬೇಕೆಂಬ ಕನಸನ್ನು ಕಂಡಿದ್ದರು. ಪ್ರತಿಯೊಬ್ಬ ಯುವಕ ನೇತಾಜಿ, ಭಗತಸಿಂಗ್ ಗಳಾಗಿ, ಯುವತಿಯರು ಝಾನ್ಸಿರಾಣಿ ಲಕ್ಷ್ಮೀಭಾಯಿಗಳಾಗಿ ಈ ವ್ಯವಸ್ಥೆಯ ವಿರುದ್ಧ ಹೋರಾಡಿ ಬಂಡವಾಳಶಾಹಿ ವಿರೋದಿ, ಸಮಾಜವಾದಿ ಕ್ರಾಂತಿಯನ್ನು ಸಂಘಟಿಸಬೇಕೆಂದು ಕರೆ ನೀಡಿದರು.
ಅಥಿತಿಗಳಾಗಿ ಮಾತನಾಡಿದ ರೈತ ಸಂಘಟನೆಯಾದ ಆರ್.ಕೆ.ಎಸ್ ನ ರಾಜ್ಯ ಖಜಾಂಚಿಗಳಾದ ಕಾಮ್ರೇಡ್ ವಿ. ನಾಗಮ್ಮಳ್ ರವರು ಸ್ವತಂತ್ರ ಸಂಗ್ರಾಮದಲ್ಲಿ ಗಾಂಧೀಜಿಯವರೊಂದಿಗೆ ವೈಚಾರಿಕ ವ್ಯತ್ಯಾಸ ಹೊಂದಿದ್ದ ನೇತಾಜಿಯವರು ಐ.ಎನ್.ಎ ಸೈನ್ಯವನ್ನು ಸಂಘಟಿಸಿ ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವತಂತ್ರ ಕೊಡುತ್ತೆನೆಂದು ಹೇಳಿ ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರ ಹೋರಾಟ ಮಾಡಿದ ಮಹಾನ್ ಸೇನಾನಿ ಎಂದು ಬಣ್ಣಿಸಿದರು.
ಭಾಷಣಕಾರರಾಗಿ ಮಾತನಾಡಿದ ಎ.ಐ.ಡಿ.ಎಸ್.ಓ ನ ಶಹಾಬಾದ ನಗರ ಸಮಿತಿಯ ಅಧ್ಯಕ್ಷರಾದ ಕಾಮ್ರೇಡ್ ತುಳಜಾರಾಮ. ಎನ್.ಕೆ ರವರು ಅಧಿಕಾರದ ಚುಕ್ಕಾಣಿ ಹಿಡಿದಿರುವ ಎಲ್ಲಾ ಸರ್ಕಾರಗಳು ನೇತಾಜಿ ಸುಭಾಷ ಚಂದ್ರ ಬೋಸ್, ಭಗತಸಿಂಗ್, ಆಶ್ಫಾಖುಲ್ಲಾ ಖಾನ್ ರಂತ ಕ್ರಾಂತಿಕಾರಿಗಳ ವಿಚಾರಗಳನ್ನು ಉದ್ದೇಶಪೂರ್ವಕವಾಗಿಯೆ ಮುಚ್ಚಿಡುವಂತಹ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು. ಆದರಿಂದಲೇ ನಮ್ಮ ಸಂಘಟನೆಗಳ ನೇತೃತ್ವದಲ್ಲಿ ದೇಶದಾದ್ಯಂತ ಕ್ರಾಂತಿಕಾರಿಗಳ ವಿಚಾರಗಳನ್ನು ವಿದ್ಯಾರ್ಥಿ-ಯುವಜನರ ನಡುವೆ ಹರಡಿಸುವಂತಹ ಕಾರ್ಯವನ್ನು ಮಾಡುತ್ತಿದೆ ಎಂದು ಹೇಳಿದರು.
ನೇತಾಜಿಯವರ ಭಾವಚಿತ್ರಕ್ಕೆ ಅಥಿತಿಗಳಾಗಿ ಆಗಮಿಸಿದ ನಗರದ ಗಣ್ಯವ್ಯಕ್ತಿಗಳಾದ ಶ್ರೀ ಶೇಖ್ ಆಶ್ಫಾಕ್ ಅಹ್ಮದ್ ರವರು ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎ.ಐ.ಡಿ.ವೈ.ಓ ನ ಶಹಾಬಾದ ನಗರ ಸಮಿತಿಯ ಅಧ್ಯಕ್ಷರಾದ ಕಾಮ್ರೇಡ ಸಿದ್ದು ಚೌದರಿಯವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಐಎಮ್.ಎಸ್.ಎಸ್ ನ ಜಿಲ್ಲಾ ಅಧ್ಯಕ್ಷರಾದ ಕಾಮ್ರೇಡ್ ಗುಂಡಮ್ಮ ಮಡಿವಾಳ ರವರು ವಹಿಸಿದ್ದರು. ಹಣಮಂತ. ಎಸ್.ಎಚ್. ಹಾಗೂ ಶಿವುಕುಮಾರ. ಇ.ಕೆ ರವರು ಕ್ರಾಂತಿಕಾರಿ ಗೀತೆಗಳನ್ನು ಹಾಡಿದರು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ವಿದ್ಯಾರ್ಥಿ-ಯುವಜನರು ಭಾಗವಹಿಸಿದರು.