ಸುರಪುರ: ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು ಇವರನ್ನು ಕೂಡಲೆ ಸೇವೆಯಿಂದ ಅಮಾನತ್ತು ಮಾಡುವಂತೆ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಮುಖಂಡರು ಆಗ್ರಹಿಸಿದರು.
ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ,ನಗರದ ಬೋವಿಗಲ್ಲಿಯ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗೆ ಸ್ಥಳಿಯ ಸುಮಿತ್ರಾ ರತ್ನಪ್ಪಾ ಎಂಬ ವಿಧವಾ ಮಹಿಳೆ ಅರ್ಜಿಸಲ್ಲಿಸಿದ್ದು,ವಿಧವಾ ಮಹಿಳೆಯ ಎಲ್ಲಾ ದಾಖಲಾತಿಗಳು ನೈಜವಾಗಿದ್ದರು ಶಿಶು ಅಭಿವೃಧ್ಧಿ ಯೋಜನಾಧಿಕಾರಿಗಳು ಈ ಮಹಿಳೆಯನ್ನು ನೇಮಕಗೊಳಿಸಿಕೊಳ್ಳದೆ ಬೇರೆಬ್ಬರನ್ನು ನೇಮಕಾತಿ ಮಾಡಿಕೊಂಡು ವಿಧವಾ ಮಹಿಳೆಗೆ ವಂಚನೆ ಮಾಡಲಾಗಿದೆ.ಅಲ್ಲದೆ ಸರಕಾರ ವಿಧವಾ ಮಹಿಳೆಯರಿಗೆ ನೇಮಕಾತಿಯಲ್ಲಿ ಮೊದಲ ಆದ್ಯತೆ ನೀಡುವಂತೆ ನಿಯಮವಿದ್ದರು ಅಧಿಕಾರಿಗಳು ಬೇರೊಬ್ಬರನ್ನು ನೇಮಿಸಿಕೊಳ್ಳುವ ಮೂಲಕ ಭ್ರಷ್ಟತೆ ಮೆರೆದಿದ್ದಾರೆ.
ಇದೊಂದೆ ಅಲ್ಲದೆ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಧಾನ್ಯಗಳ ಪ್ರತಿ ಚೀಲದಲ್ಲಿ ೪-೫ ಕೆ.ಜಿ ಕಡಿಮೆ ಕೊಡುತ್ತಾರೆ.ಡಿಸೆಂಬರ್ ಜನೆವರಿ ತಿಂಗಳಿಂದ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಿಸಿರುವುದಿಲ್ಲ.ಅಲ್ಲದೆ ಅಂಗನವಾಡಿ ಕಾರ್ಯಕರ್ತೆಯರಿಗೆ ನಕಲಿ ಬಿಲ್ ಮಾಡಿಕೊಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿ, ಇದರ ಬಗ್ಗೆ ತನಿಖೆ ನಡೆಸಿ ಅಕ್ರಮ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.ಮುಖ್ಯವಾಗಿ ಬೋವಿಗಲ್ಲಿ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ಧೆ ನೇಮಕಾತಿಯಲ್ಲಿ ನಡೆದ ಅನ್ಯಾಯವನ್ನು ಸರಿಪಡಿಸಿ ವಿಧವಾ ಮಹಿಳೆಗೆ ಹುದ್ದೆ ದೊರಕಿಸಿ ಕೊಡುವ ಜೊತೆಗೆ ಸಿಡಿಪಿಒ ಅವರ ಮೇಲೆ ಕ್ರಮ ಕೈಗೊಳ್ಳಬೇಕು.ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ನಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರೆದಾರವರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ವೆಂಕೋಬ ದೊರೆ,ನಾಗಣ್ಣ ಕಲ್ಲದೇವನಹಳ್ಳಿ,ಮರೆಪ್ಪ ಕನ್ಯೆಕೊಳೂರ,ರಮೇಶಗೌಡ,ಖಾಜಾ ಅಜ್ಮೀರ್ ಖುರೇಶಿ,ಶಿವಶಂಕರ ಹೊಸ್ಮನಿ,ರವಿ ನಾಯಕ ಬೈರಿಮಡ್ಡಿ,ಉಸ್ತಾದ ವಜಾಹತ್ ಹುಸೇನ,ರೇವಣ್ಣಸಿದ್ದ ಗುಡಿಮನಿ,ಮಲ್ಲಪ್ಪ ನಾಯಕ,ಮಲ್ಲಿಕಾರ್ಜುನ ಜಾಲಿಬೆಂಚಿ ಹಾಗು ಹುದ್ದೆ ಆಕಾಂಕ್ಷಿ ಮಹಿಳೆ ಹಾಗು ಸಂಬಂಧಿಗಳಿದ್ದರು.