ಕಲಬುರಗಿ: ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯ ಕೋರಿ ಮಾತನಾಡಿದ ಉಪ ಮುಖ್ಯಮಂತ್ರಿ ಪರಮೇಶ್ವರ, ಚುನಾವಣೆಯಲ್ಲಿ ಸ್ವಾಭಾವಿಕವಾಗಿ ನಾವು ಮಾಡಿದ ಕೆಲಸ ಮಾಡಿದ್ದನ್ನು ಅಥವಾ ಮುಂದೆ ಮಾಡಬಹುದಾಗಿದ್ದನ್ನು ಹೇಳಲಾಗುತ್ತದೆ. ಈ ಸಲ ವಿರೋಧ ಪಕ್ಷದ ನಾಯಕರು ವೈಯಕ್ತಿಕವಾಗಿ ಟೀಕೆ ಮಾಡುವ ಮೂಲಕ ಮತ ಕೇಳುತ್ತಿದ್ದಾರೆ. ಪ್ರಧಾನಿ ಮೋದಿಯವರು ಅಗಲಿಹೋದ ನಾಯಕ ರಾಜೀವ್ ಗಾಂಧಿ ಕುರಿತು ಅವಹೇಳನೆ ಮಾಡಿದ್ದಾರೆ. ಇದನ್ನೇ ರಾಜ್ಯದ ನಾಯಕರು ಅನುಸರಿಸುತ್ತಿದ್ದಾರೆ ಎನಿಸುತ್ತಿದೆ ಎಂದು ಟೀಕಿಸಿದರು.
ಅವರು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾಧವ್ ಹಣ ಪಡೆದು ಬಿಜೆಪಿ ಸೇರಿದ್ದಾರೆ ಎಂದು ಜನ ಮಾತಮಾಡುತ್ತಿದ್ದಾರೆ. ಸರಕಾರ ಬೀಳಿಸುವ ಬಿಎಸ್ ವೈ ಅವರ ಸ್ಕೀಮ್‌ಆಫ್ ಥಿಂಕ್ಸ್ನಭಾಗವಾಗಿದ್ದಾರೆ. ವಿರೋಧಪಕ್ಷದ ನಾಯಕರಾಗಿ ಬಿಎಸ್ ವೈ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬರಪರಿಸ್ಥಿತಿಯಲ್ಲಿ ಕೇಂದ್ರ ರಾಜ್ಯಕ್ಕೆ ತಾರತಮ್ಯ ನೀತಿ ಅನುಸರಿಸುತ್ತಿದೆ. ರಾಜ್ಯಕ್ಕೆ ಕೇವಲ 900 ಕೋಟಿ ಬಿಡುಗಡೆ ಮಾಡಿ ಪಕ್ಕದ ರಾಜ್ಯಕ್ಕೆ 4000 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೇಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಅವರ ಪರವಾಗಿ ಜನ ಮತ ನೀಡಲಿದ್ದಾರೆ. ಹಣ ಪಡೆದು ಬಿಜೆಪಿ ಸೇರಿದ ಜಾಧವ್ ಗೆ ಜನ ಪಾಠಕಲಿಸಲಿದ್ದಾರೆ. ಇದು ರಾಜ್ಯಕ್ಕೆ ಮಾದರಿ ಫಲಿತಾಂಶವಾಗಲಿದೆ. ಕ್ಯಾಬಿನೆಟ್ ವಿಸ್ತರಣೆ ಕುರಿತು ಯಾವುದೇ ಯೋಚನೆ ಮಾಡಿಲ್ಲ. ರಾಜ್ಯದಲ್ಲಿ ತೀವ್ರ ಬರಕ್ಷಾಮವಿದೆ. ಅದನ್ನು ಮೊದಲು ನಾವು ಅಟೆಂಡ್ ಮಾಡಬೇಕಿದೆ. ಬರ ಕುರಿತು ಕ್ರಮ ಕೈಗೊಳ್ಳಲು ಅನುಮತಿ ಕೋರಿ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಚುನಾವಣೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆಯವರೊಂದಿಗೆ ಸಭೆ ನಡೆಸಲು ಅನುಮತಿ ಕೇಳಿದ್ದೇವೆ ಎಂದರು.
ಜನ ಸಂಕಟದಲ್ಲಿದ್ದಾಗ ಸಿಎಂ ರೆಸಾರ್ಟ್ ನಲ್ಲಿದ್ದಾರೆ ಎನ್ನುವ ಬಿಎಸ್ ವೈ ಮಾತಿಗೆ ಡಿಸಿಎಂ ಪ್ರತಿಕ್ರಿಯೆ ನೀತಿ ಸಂಹಿತೆಯಿಂದಾಗಿ ಅಧಿಕಾರಿಗಳ ಸಭೆ ನಡೆಸಲಾಗಿಲ್ಲ. ತುಮಕೂರಿನಲ್ಲಿ ದೇವೇಗೌಡರು ಗೆಲ್ಲುತ್ತಾರೆ.ನಾನು ಅವರ ಪರ ಕೆಲಸ ಮಾಡಿಲ್ಲ ಎನ್ನುವ ಬಿಜೆಪಿ ನಾಯಕ ಸುರೇಶ್ ಗೌಡ ಸತ್ಯಕ್ಕೆದೂರ. ಸೋಲುವ ಭೀತಿಯಲ್ಲಿ ಇಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಬೆಳಗಾವಿ ವಿಚಾರದಲ್ಲಿ ಸಚಿವ ಡಿಕೆಶಿ ಅವರ ವೈಯಕ್ತಿಕ ಪ್ರತಿಷ್ಠೆಯಿಲ್ಲ. ಬರ ನಿರ್ವಹಣೆಗೆ ಕರೆದ ಸಭೆಗೆ ರಮೇಶ್ ಜಾರಕಿಹೊಳಿ ಬರಬೇಕಿತ್ತು. ಪ್ರಭಾಕರ ಕೋರೆ ಹೊರತು ಬಿಜೆಪಿಯ ಯಾವ ಜನಪ್ರತಿನಿಧಿಗಳು ಭಾಗವಹಿಸಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಸಲಹೆ ನೀಡಿದರು.