ಸುರಪುರ: ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿನ ಮರಡಿ ಮೌನೇಶ್ವರ ಮಠದ ಆವರಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮೂರನೇ ವರ್ಷದ ಜಾತ್ರಾ ಮಹೋತ್ಸವ ನಡೆಸಲಾಯಿತು.ಒಂಬತ್ತು ದಿನಗಳ ಕಾಲ ಮಾಹಸಾಧ್ವಿ ಹೇಮರಡ್ಡಿ ಮಲ್ಲಮ್ಮ ಮಹಾಪುರಾಣ ಹಾಗು ನಿತ್ಯವು ವಿವಿಧ ಮಠಾಧೀಶರುಗಳಿಂದ ಆಶೀರ್ವಚನ ಕಾರ್ಯಕ್ರಮ ಜರುಗಿದವು.
ಮಹಾಶಿವರಾತ್ರಿಯ ದಿನವಾದ ಶುಕ್ರವಾರ ಬೆಳಿಗ್ಗೆ ಶ್ರೀ ಮೌನೇಶ್ವರ ಹಾಗು ಈರಡ್ಡೆಪ್ಪ ಮೂರ್ತಿಗೆ ರುದ್ರಾಭೀಷೇಕ ಅಷ್ಟೋತ್ತರ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಜರುಗಿತು.ನಂತರ ಶ್ರೀ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಶ್ರೀ ಪಂಚಾಕ್ಷರಿ ಮಹಾಸಂಸ್ಥಾನ ಬೃಹನ್ಮಠ ಸುಲ್ತಾನಪುರ ಇವರ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಾಗು ಸುಮಂಗಲಿಯರ ಹುಡಿ ತುಂಬುವ ಕಾರ್ಯಕ್ರಮ ಮತ್ತು ಜಂಗಮರ ಪಾದ ಪೂಜೆ ಕಾರ್ಯಕ್ರಮ ಜರುಗಿದವು.ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಸಂಜೆ ಮೌನೇಶ್ವರ ಮಠದ ಆವರಣದಲ್ಲಿ ಶಿವನ ಮೂರ್ತಿಯ ಮುಂದೆ ಸಹಸ್ರಾರು ದೀಪೋತ್ಸವ ಕಾರ್ಯಕ್ರಮ ನಡೆಯಿತು.ನಂತರ ಸಂಜೆ ಗ್ರಾಮದಲ್ಲಿ ಶಿವಲಿಂಗದ ಮೆರವಣಿಗೆ ನಡೆಸಲಾಯಿತು.
ನಂತರ ರಾತ್ರಿ ಶ್ರೀ ಮಡಿವಾಳಯ್ಯ ಶಾಸ್ತ್ರಿ ಕಾರಟಗಿಯವರಿಂದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮನ ಮಹಾಪುರಾಣ ಮಂಗಲ ಕಾರ್ಯಕ್ರಮ ನಡೆಯಿತು.ಸಿದ್ದಯ್ಯಸ್ವಾಮಿ ಪಡದಳ್ಳಿ ಹಾಗು ರಾಜಶೇಖರ ಗೆಜ್ಜಿಯವರಿಂದ ಸಂಗೀತ ಸೇವೆ ನೆರವೇರಿತು.
ಕಾರ್ಯಕ್ರಮದಲ್ಲಿ ವೀರೇಶ ಹಿರೇಮಠ,ಮಲ್ಲಯ್ಯ ಸ್ವಾಮಿ ಮೇದಿನಪುರ,ವೀರಭದ್ರಯ್ಯಸ್ವಾಮಿ ಹಿರೇಮಠ, ಬೂದಯ್ಯಸ್ವಾಮಿ, ಗುರಣ್ಣಗೌಡ ಬಂಟನೂರ,ಸೋಮಶೇಖರಗೌಡ,ಕಲ್ಲಪ್ಪ ಸಾಹುಕಾರ,ಡಾ. ಬಸನಗೌಡ ಬಂಟನೂರ,ಶಿವರಡ್ಡಿ ಬಿರಾದಾರ,ರಾಜುಗೌಡ ಬಂಟನೂರ, ಚನ್ನುಗೌಡ, ಶಿವರಡ್ಡಿಗೌಡ, ರವಿಗೌಡ, ಮಹಿಪಾಲರಡ್ಡಿ, ನೀಲಕಂಠರಡ್ಡಿಗೌಡ,ಕಲ್ಲಪ್ಪ ಸಾಹುಕಾರ,ಶರಣು ಸಾಹುಕಾರ,ವಿರಪಣ್ಣಗೌಡ ಮುಂತಾದವರಿದ್ದರು.ರಾಜು ಬಿರಾದಾರ ನಿರೂಪಿಸಿದರು,ಹನುಮಂತರಡ್ಡಿ ವಂದಿಸಿದರು.