- ರಾಜೇಂದ್ರ ರಾಜವಾಳ್
ಯಾದಗಿರಿ: ಸುಕ್ಷೇತ್ರ ಅಬ್ಬೆತುಮಕೂರಿನ ಸಿದ್ಧಿ ಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಭಕ್ತರ ಜಯಘೋಷದ ಮಧ್ಯೆ ಸಡಗರದಿಂದ ಶುಕ್ರವಾರ ಸಂಜೆ 6:30 ಕ್ಕೆ ಜರುಗಿತು.
ಸಿದ್ಧ ಸಂಸ್ಥಾನ ಮಠದ ಆವರಣದಲ್ಲಿ ಲಕ್ಷಾಂತರ ಭಕ್ತರು ವಿಶ್ವಾರಾಧ್ಯರ ರಥೋತ್ಸವದಲ್ಲಿ ಪಾಲಗೋಡಿದರು. ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಸಂಜೆ 6.30ಕ್ಕೆ ರಥವನ್ನೇರಿ ಚಾಲನೆ ನೀಡಿದ್ದೇ ತಡ ಭಕ್ತ ವೃಂದ ವಿಶ್ವಾರಾಧ್ಯ ಮಹಾರಾಜ ಕೀ ಜೈ, ಗಂಗಾಧರ ಮಹಾರಾಜ ಕೀ ಜೈ ಎಂದು ಜಯಘೋಷ ಮೊಳಗಿಸುತ್ತ ರಥವನ್ನು ಎಳೆದು ಸಂಭ್ರಮಿಸಿದರು.ನೆರೆದ ಭಕ್ತ ಸಮೂಹ ಖಾರಿಕ, ಉತ್ತತ್ತಿ, ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿಯಿಂದ ಕೈ ಜೋಡಿಸಿ ನಮಿಸಿ, ಇಷ್ಟಾರ್ಥ ಈಡೇರಿಸುವಂತೆ ಆರಾಧ್ಯದೈವನಲ್ಲಿ ಬೇಡಿಕೊಂಡರು.
ಜಿಲ್ಲೆಯ ಪ್ರತಿಷ್ಠಿತ ಆಧ್ಯಾತ್ಮಿಕ ಕೇಂದ್ರವೆಂದು ಖ್ಯಾತವಾದ ಹಾಗೂ ಸಿದ್ಧ ಸಂಸ್ಥಾನದ ಶ್ರೀ ವಿಶ್ವಾರಾಧ್ಯರ ಜಾತ್ರೆ ಎಂದರೆ ಕರ್ನಾಟಕ ಮಾತ್ರವಲ್ಲ, ನೆರೆಯ ತೆಲಂಗಾಣ, ಆಂಧ್ರ, ಮಹಾರಾಷ್ಟ್ರಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿ ದರ್ಶನಾ ಮತ್ತು ಆಶೀರ್ವಾದ ಪಡೆಯುತ್ತಾರೆ. – ಈಶಾಪ್ಪ ಅಬ್ಬೆ ತುಮಕೂರು, ಗ್ರಾಮದ ರೈತ.
ತರುವಾಯ ದುಧನಿಯ ಶಂಕರ ಮೇತ್ರಿ ದಂಪತಿ ರಥೋತ್ಸವ ಮಹಾಪೂಜೆ ಮತ್ತು ರಥಾಂಗ ಹೋಮ ನೆರವೇರಿಸಿದರು.
ಬಳಿಕ ಶ್ರೀಗಳು ತೇರಿಗೆ ವಿಶೇಷ ಪೂಜೆ ನೆರವೇರಿಸಿ ಕಳಸವನ್ನು ಆರೋಹಣ ಮಾಡಿದರು. ಹಲಗೆ, ಬಾಜಾ ಭಜಂತ್ರಿ, ಡೊಳ್ಳು ಮುಂತಾದ ಮಂಗಲವಾದ್ಯಗಳ ಸದ್ದು, ಭಕ್ತರ ಸಂಭ್ರಮ, ಪುರವಂತರ ಸೇವೆ ಇಡೀ ಅಬ್ಬೆತುಮಕೂರು ಗ್ರಾಮವನ್ನು ಭಕ್ತಿಯ ಬೀಡನ್ನಾಗಿಸಿತು. ದಾಸೋಹ ಮನೆ ಸೇರಿ ಶಹಾಬಾದ್ ಮತ್ತು ನಾಯ್ಕಲ್ ದಾಸೋಹಿಗಳು ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದರು.