ವಾಡಿ: ಬಡಾವಣೆಗಳಲ್ಲಿ ಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿಗೆ ಸೀಮಿತವಾಗಿದ್ದ ಪುರಸಭೆ ಆಡಳಿತದ ಅನುದಾನ, ಶಾಲೆಗಳಿಗೆ ಪೀಠೋಪಕರಣ ಸೌಲಭ್ಯ ಒದಗಿಸುವಲ್ಲೂ ಬಳಕೆಯಾಗಿದೆ. ಮಕ್ಕಳ ಸುರಕ್ಷಿತ ವಿದ್ಯಾಭ್ಯಾಸಕ್ಕಾಗಿ ಅನುದಾನ ಬಳಕೆಯಾಗುತ್ತಿರುವುದು ಹರ್ಷದಾಯಕ ಸಂಗತಿ.
ಶನಿವಾರ ಪಟ್ಟಣದ ಅನುದಾನಿತ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಗೆ ಹಾಗೂ ಅಲ್ ಅಮೀನ್ ಉರ್ದು ಶಾಲೆಗೆ ಪುರಸಭೆ ವತಿಯಿಂದ ಲೋಹದ ಡೆಸ್ಕ್ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ೨೦೧೯-೨೦ನೇ ಸಾಲಿನ ಶೆ.೭.೫ ಅನುದಾನದಡಿ ಒಟ್ಟು ೨ ಲಕ್ಷ ರೂ. ವೆಚ್ಚದಡಿ ಏರಡೂ ಶಾಲೆಗಳಿಗೆ ತಲಾ ೨೦ ಡೆಸ್ಕ್‌ಗಳಂತೆ ಒಟ್ಟು ನಲವತ್ತು ಗುಣಮಟ್ಟದ ಬೆಂಚ್‌ಗಳನ್ನು ವಿತರಣೆ ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಶೈಕ್ಷಣಿಕ ಅನುಕೂಲತೆ ಒದಗಿಸಬೇಕು ಎಂದು ಹೇಳಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಲ್ಯಾಣರಾವ ಶೆಳ್ಳಗಿ, ಕಾರ್ಯದರ್ಶಿ ಅಣ್ಣಾರಾವ ಪಸಾರೆ, ಪುರಸಭೆ ಸಮುದಾಯ ಸಂಘಟಕ ಕಾಶೀನಾಥ ಧನ್ನಿ, ಪುರಸಭೆ ಸದಸ್ಯರಾದ ಭೀಮಶಾ ಜಿರೊಳ್ಳಿ, ದೇವಿಂದ್ರ ಕರದಳ್ಳಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ಮುಖ್ಯಶಿಕ್ಷಕರಾದ ಮಲ್ಲೇಶ ನಾಟೀಕಾರ, ಚಂದ್ರಶೇಖರ ಕಲ್ಲೂರೆ, ಶಿವುಕುಮಾರ ಮಲಕಂಡಿ, ಸಿದ್ದಮ್ಮ, ಮಹಾನಂದಾ ನೀಲೂರ, ಎಲ್.ನಾಗೇಶ ಪಾಲ್ಗೊಂಡಿದ್ದರು.