ಸುರಪುರ: ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಭಾರಿ ಮೊತ್ತದ ದಂಡವಿದ್ದು ಎಲ್ಲರು ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲಿಸಬೇಕೆಂದು ತಿಳಿ ಹೇಳುವಂತೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬಯಸುವುದಾಗಿ ಸುರಪುರ ಉಪ ವಿಭಾಗಾಧಿಕಾರಿ ವೆಂಕಟೇಶ ಹುಗಿಬಂಡಿ ತಿಳಿಸಿದರು.
ನಗರದ ಪೋಲಿಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಎಲ್ಲಾ ದ್ವೀಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಹಾಗು ವಿಮೆ ಮಾಡಿಸಲು ಜಾಗೃತಿ ಮೂಡಿಸುವಂತೆ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆದು ತಿಳಿಸಲಾಗಿದೆ. ಪಂಚಾಯತಿ,ಲೋಕೊಪಯೋಗಿ,ಸಾರ್ವಜನಿಕ ಶಿಕ್ಷಣ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಆರೋಗ್ಯ ಇಲಾಖೆ,ಅರಣ್ಯ ಇಲಾಖೆ,ಸಮಾಜ ಕಲ್ಯಾಣ ಇಲಾಖೆ ಹೀಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ಬಳಿಗೆ ಬರುವವರಿಗೆ ಹೆಲ್ಮೆಟ್ ಧರಿಸುವಂತೆ,ವಿಮೆ ಮಾಡಿಸುವಂತೆ ಮತ್ತು ಸಂಚಾರಿ ನಿಯಮಗಳ ಪಾಲಿಸುವಂತೆ ಜಾಗೃತಿ ಮೂಡಿಸಿದಲ್ಲಿ ಎಷ್ಟೋ ಅಪಘಾತಗಳನ್ನು ತಪ್ಪಿಸಲು ಸಾಧ್ಯವಿದೆ.ಅಲ್ಲದೆ ಅತೀ ಹೆಚ್ಚಿನ ಬೈಕ್ ಸವಾರರು ಈ ಇಲಾಖೆಗಳಿಗೆ ಬರುವವರಾಗಿರುತ್ತಾರೆ ಹಾಗು ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಆಯಾ ಕಾಲೇಜುಗಳಿಗೆ ತಿಳಿಸುವುದಾಗಿ ತಿಳಿಸಿದರು.
ನಾನು ಬಂದ ನಂತರ ಸಂಚಾರಿ ನಿಯಮ ಪಾಲಿಸದವರ ಮೇಲೆ ಅನೇಕ ಕೇಸುಗಳ ಹಾಕಲಾಗಿದ್ದು ಸುಮಾರು ಎರಡುವರೆ ಲಕ್ಷದಷ್ಟು ದಂಡ ವಸೂಲಿ ಮಾಡಲಾಗಿದೆ,ಮುಂದೆಯೂ ದಾಳಿ ಹೀಗೆಯೆ ಮುಂದುವರೆಯಲಿದೆ. ಆದ್ದರಿಂದ ಎಲ್ಲರೂ ಹೆಲ್ಮೆಟ್ ಧರಿಸಲು ಮತ್ತು ಬೈಕ್‌ಗಳ ವಿಮೆ ಮಾಡಿಸಲು ಮಾದ್ಯದವರು ಕಾಳಜಿವಹಿಸಿ ಸುದ್ದಿ ಮಾಡುವಂತೆ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಪೋಲಿಸ್ ಇನ್ಸ್ಪೇಕ್ಟರ್ ಆನಂದರಾವ್ ಮಾತನಾಡಿ,ಮುಖ್ಯಾ ಹೆದ್ದಾರಿಗಳಲ್ಲಿ ಬಿದ್ದಿರುವ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಿಸುವಂತೆ ಹೆದ್ದಾರಿ ಸುರಕ್ಷತಾ ಅಧಿಕಾರಿ ಐ.ರೆಡ್ಡಿಯವರಿಗೆ ತಿಳಿಸಲಾಗಿದೆ.ಟಂ ಟಂ ಆಟೋ ಮತ್ತು ಜೀಪುಗಳ ಮೇಲೆ ಜನರನ್ನು ಕೂಡಿಸದಂತೆ ಕ್ರಮ ಕೈಗೊಳ್ಳಲು ಮೇಲೆ ಹಾಕಲಾಗಿರುವ ಕ್ಯಾರಿಯರನ್ನು ತೆಗೆಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.