ವಾಡಿ: ಉದ್ಯೋಗ ಕಲ್ಪಿಸುವ ಭರವಸೆ ನೀಡುವ ಮೂಲಕ ಭೂಮಿ ಖರೀದಿಸಿರುವ ಲೆಫಾರ್ಜ್ ಸಿಮೆಂಟ್ ಕಂಪನಿ ರೈತರಿಗೆ ಮೋಸ ಮಾಡಿದೆ. ಈ ಕುರಿತು ಕಾನೂನು ಹೋರಾಟ ಆರಂಭಿಸುವುದಾಗಿ ಜೈ ಕಿಸಾನ ಸೇವಾ ಸಂಘದ ಅಧ್ಯಕ್ಷ ಶಂಕರಸಿಂಗ್ ರಾಠೋಡ ಎಚ್ಚರಿಸಿದರು.
ಪಟ್ಟಣದ ರಾಮನಗರ ತಾಂಡಾ ವ್ಯಾಪ್ತಿಯ ರೈತರ ಜಮೀನಿನಲ್ಲಿ ಏರ್ಪಡಿಸಲಾಗಿದ್ದ ಭೂಮಿ ಕಳೆದುಕೊಂಡ ರೈತರ ಸಭೆ ಹಾಗೂ ಕಂಪನಿ ವಿರುದ್ಧ ಹೋರಾಟ ಮಾಡಲು ಸ್ಥಾಪಿಸಲಾದ ಜೈ ಕಿಸಾನ ಸೇವಾ ಸಂಘದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವಾಡಿ ನಗರದ ಹೊರ ವಲಯದ ರಾವೂರ-ರಾಮನಗರ ತಾಂಡಾ ಮಧ್ಯೆ ಸಿಮೆಂಟ್ ಉತ್ಪಾದನಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಿದ ಲೆಫಾರ್ಜ್ ಮಾಲೀಕರು, ರೈತರಿಗೆ ಬಣ್ಣ ಬಣ್ಣದ ಕನುಗಳನ್ನು ತೋರಿಸಿ ಜಮೀನು ಕಿತ್ತುಕೊಂಡಿದ್ದಾರೆ. ಭೂಮಿ ಬರೆದುಕೊಟ್ಟ ರೈತರಿಗೆ ಬಿಡಿಗಾಸಿನ ಬೆಲೆ ನೀಡುವ ಮೂಲಕ ಮಹಾವಂಚನೆ ಮಾಡಿ ಬೀದಿಗೆ ತಳ್ಳಿದೆ ಎಂದು ಆರೋಪಿಸಿದರು.
ಎಕರೆ ಭೂಮಿಗೆ ಉತ್ತಮ ಬೆಲೆ ಮತ್ತು ಸರ್ವೇ ನಂಬರ್ ಲೆಕ್ಕದಡಿ ಕುಟುಂಬ ಸದಸ್ಯರಿಗೆ ನೌಕರಿ ನೀಡುವುದಾಗಿ ಭರವಸೆ ಕೊಟ್ಟ ಪ್ಯಾರೀಸ್-ಫ್ರಾನ್ಸ್ ಮೂಲದ ಲೆಫಾರ್ಜ್ ಸಿಮೆಂಟ್ ಕಂಪನಿ, ಕಳೆದ ಹತ್ತು ವರ್ಷಗಳ ಹಿಂದೆ ವಾಡಿ ನಗರಕ್ಕೆ ಆಗಮಿಸಿ ರೈತರ ಜಮೀನು ಸರ್ವೆ ನಡೆಸಿತು. ಸುಮಾರು ೨೦೦೦ ಎಕರೆ ಭೂಮಿ ಖರೀದಿಸುವ ಗುರಿ ಹೊಂದಿದ ಕಂಪನಿ, ಕೆಐಡಿಬಿ ಮಧ್ಯಸ್ಥಿಕೆಯಿಲ್ಲದೆ ಎಕರೆಗೆ ರೂ.೯ ಲಕ್ಷ ದರದಂತೆ ಒಟ್ಟು ೭೦೦ ಎಕರೆ ಭೂಮಿ ಖರೀದಿಸಿದೆ. ಭೂಮಿ ಖರೀದಿಸಿ ಹತ್ತು ವರ್ಷಗಳು ಉರುಳುತ್ತಿವೆ.
ಇಂದಿಗೂ ಘಟಕ ಸ್ಥಾಪಿಸುವ ಕಾರ್ಯ ಶುರುವಾಗಿಲ್ಲ. ಕುಟುಂಬ ಸದಸ್ಯರಿಗೆ ನೌಕರಿ ಭಾಗ್ಯವೂ ಕಲ್ಪಿಸಿಲ್ಲ. ಕಂಪನಿ ಸ್ಥಾಪಿಸುವ ಕಾರ್ಯ ನನೆಗುದಿಗೆ ಬಿದ್ದಿದ್ದು, ರೈತರು ಕಂಗಾಲಾಗಿದ್ದಾರೆ. ಐದು ವರ್ಷಗಳ ಕಾಲ ಭೂಮಿಯ ಉಳುಮೆ ನಿಲ್ಲಿಸಿದ್ದ ರೈತರು, ಕಂಪನಿಯ ಮೋಸಗಾರಿಕೆ ಅರಿತು ಮಾರಾಟ ಮಾಡಲಾದ ತಮ್ಮ ಜಮೀನಿನಲ್ಲಿ ಪುನಃಹ ಬೇಸಾಯ ಆರಂಭಿಸಿದ್ದಾರೆ. ಲೆಫಾರ್ಜ್ ಕಂಪನಿ ಆಡಳಿತ ಮಂಡಳಿ ಕೂಡಲೆ ರೈತರೊಂದಿಗೆ ಮಾತುಕತೆಗೆ ಮುಂದಾಗಬೇಕು. ಘಟಕ ಆರಂಭಿಸುವುದಾದರೆ ಎಕರೆಗೆ ೪೦ ಲಕ್ಷ ದರ ನೀಡಿ ನೌಕರಿ ಖಾತ್ರಿಪಡಿಸಬೇಕು. ಅಥವ ಎಲ್ಲಾ ರೈತರಿಗೆ ಭೂಮಿ ಹಿಂತಿರುಗಿಸಬೇಕು. ನಿರ್ಲಕ್ಷ್ಯ ವಹಿಸಿದರೆ ರೈತ ಸಂಘ ಕಾನೂನು ಹೋರಾಟ ಆರಂಭಿಸಲಿದೆ ಎಂದು ಎಚ್ಚರಿಸಿದರು.
ನ್ಯಾಯವಾದಿ ಗಿರಿಧರ ಆರ್.ವೈಷ್ಣವ್ ಮಾತನಾಡಿ, ವಿವಿಧ ಕಾರ್ಖಾನೆಗಳಿಗೆ ಭೂಮಿ ನೀಡುವ ರೈತರು ಸರಳವಾಗಿ ಬಂಡವಾಳಗಾರರ ಮೋಸಕ್ಕೆ ತುತ್ತಾಗುತ್ತಿದ್ದಾರೆ. ಫಲವತ್ತಾದ ಭೂಮಿ ಖರೀದಿಸುವಂತಿಲ್ಲ. ಬಂಜರು ಭೂಮಿಯನ್ನು ಕೆಐಎಡಿಬಿ ಮೂಲಕ ಕಂಪನಿಗಳು ಭೂಮಿ ಖರೀದಿಸಬೇಕು. ಆದರೆ ಈ ಲೆಫಾರ್ಜ್ ಕಂಪನಿ ಕಾನೂನು ಉಲ್ಲಂಘಿಸಿ ರೈತರಿಗೆ ಮೋಸ ಮಾಡಿದೆ. ಭೂಮಿ ಖರೀದಿಸಿದ ಐದು ವರ್ಷಗಳ ಒಳಗಾಗಿ ಘಟಕ ಸ್ಥಾಪಿಸಬೇಕಿತ್ತು. ಹತ್ತು ವರ್ಷವಾದರೂ ಘಟಕದ ಕಾಮಗಾರಿ ಶುರುವಾಗಿಲ್ಲ. ಆಮಿಷ್ಯಗಳಿಗೆ ಬಲಿಯಾಗದೆ ರೈತರು ಒಗ್ಗಟ್ಟಾಗಿದ್ದರೆ ಕಂಪನಿ ವಿರುದ್ಧದ ಕಾನೂನು ಹೋರಾಟದಲ್ಲಿ ಜಯಗಳಿಸಬಹುದು ಎಂದರು.
ಜೈ ಕಿಸಾನ ಸೇವಾ ಸಂಘದ ಉಪಾಧ್ಯಕ್ಷ ಹರವಿಂದರಸಿಂಗ್ ಭಾಟಿಯಾ, ಕಾರ್ಯದರ್ಶಿ ರಾಜು ಹರನಾಳ, ಖಜಾಂಚಿ ಬಬ್ರೂನ್ ಚವ್ಹಾಣ, ರೈತ ಮುಖಂಡರಾದ ರಾಜು ಚವ್ಹಣ, ವೀರೇಂದ್ರ ರಾಠೋಡ, ಹಿರಾಸಿಂಗ್ ರಾಠೋಡ, ಚಂದ್ರಕಾಂತ ಕಾನಕುರ್ತೆ, ಲಚಮಯ್ಯ ಹರನಾಳ, ಸೋಮನಾಥ ಚಂದು, ರಾಮು ರಾಠೋಡ, ಶಂಕರ ಮಾನು, ಎನ್.ಚಂದ್ರಕಾಂತ, ಗೋವಿಂದ ಚವ್ಹಾಣ ಸೇರಿದಂತೆ ನೂರಾರು ಜನ ರೈತರು ಪಾಲ್ಗೊಂಡಿದ್ದರು.