ಮ್ಯಾಜಿಸ್ಟ್ರೇಟ್ ಅಧಿಕಾರ ಬಳಸಿಕೊಂಡು ಎಂ.ಸಿ.ಸಿ ಕಟ್ಟುನಿಟಾಗಿ ಜಾರಿಗೊಳಿಸಿ

0
41

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸುಸೂತ್ರವಾಗಿ ನಡೆಯಲು ೧೦ ರಿಂದ ೧೨ ಮತಗಟ್ಟೆಗಳಿಗೆ ತಲಾ ಒಬ್ಬರಂತೆ ಕ್ಷೇತ್ರದಲ್ಲಿ ಒಟ್ಟು 21 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ಅವರಿಗೆ ಗೃಹ ಇಲಾಖೆಯಿಂದ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಲಾಗಿದ್ದು, ತಮ್ಮ ಅಧಿಕಾರದ ಜವಾಬ್ದಾರಿಯನ್ನು ಅರಿತು ಎಂ.ಸಿ.ಸಿ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕ ಬಿ.ರಾಮರಾವ ಅವರು ಸೆಕ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗುರುವಾರ ಚಿಂಚೋಳಿ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೆಕ್ಟರ್ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸಭೆ ನಡೆಸಿದ ಅವರು, ಚಿಂಚೋಳಿ ಸೂಕ್ಷ್ಮ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತುಂಬಾ ಜಾಗರೂಕತೆಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದರು.
ಸೆಕ್ಟರ್ ಅಧಿಕಾರಿಗಳು ಮತದಾನದ ಪೂರ್ವ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಿರುವ ಬಗ್ಗೆ ಪರಿಶೀಲನೆ ಮಾಡಬೇಕು. ಚುನಾವಣಾ ಮುನ್ನ ದಿನ ಚುನಾವಣಾ ಸಿಬ್ಬಂದಿ ಮತಗಟ್ಟೆಗಳೀಗೆ ತಲುಪಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು. ಮತದಾನ ದಿನದಂದು ಬೆಳಿಗ್ಗೆ ಅಣಕು ಮತದಾನ ಮಾಡಿರುವ ಬಗ್ಗೆ ದೃಢೀಕರಣ ಪಡೆದು ತದನಂತರ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಹಾಗೂ ಪ್ರತಿ 2 ಗಂಟೆಗೊಮ್ಮೆ ಚುನಾವಣಾ ಸಂಬಂಧ ಪ್ರತಿ ಮತಗಟ್ಟೆವಾರು ವರದಿ ನೀಡುವುದು. ಮತದಾನ ಮುಗಿದ ನಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವ ಬಗ್ಗೆ ನಂತರ ಡಿಮಸ್ಟ್ರಿಂಗ್ ಕಾರ್ಯದ ಕುರಿತು ಸಹ ಮಾಹಿತಿ ಸಲ್ಲಿಸಬೇಕು ಎಂದರು.

Contact Your\'s Advertisement; 9902492681

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು 241 ಮತಕೇಂದ್ರಗಳ ಪೈಕಿ 60 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇದರಲ್ಲಿ 25 ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ಅಳವಡಿಲಾಗಿದ್ದು, ಉಳಿದ 35 ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಇದರ ಜೊತೆಗೆ ಎಲ್ಲಾ 60 ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಸಿ.ಆರ್.ಪಿ.ಎಫ್. ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

ಇ.ವಿ.ಎಂ. ಮತಯಂತ್ರ ಕೆಟ್ಟಲ್ಲಿ ಕೂಡಲೆ ಬದಲಿಸಿ:- ಮತದಾನ ದಿನದಂದು ತಾಂತ್ರಿಕ ಸಮಸ್ಯೆಗಳಿಂದ ಕ್ಷೇತ್ರದ ಯಾವುದೇ ಮತಗಟ್ಟೆಯಲ್ಲಿ ಇ.ವಿ.ಎಂ, ವಿವಿಪ್ಯಾಟ್ ಮತಯಂತ್ರಗಳು ಕೆಟ್ಟಿರುವ ಬಗ್ಗೆ ದೂರು ಬಂದಲ್ಲಿ ಕೂಡಲೆ ಸ್ಥಳಕ್ಕೆ ಧಾವಿಸಿ ಮತಯಂತ್ರಗಳನ್ನು ಬದಲಾಯಿಸಿ ಸುಗಮ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಾಮಾನ್ಯ ವೀಕ್ಷಕ ಬಿ.ರಾಮರಾವ ತಿಳಿಸಿದರು.

ಸಭೆಯಲ್ಲಿ ಚಿಂಚೋಳಿ ಚುನಾವಣಾಧಿಕಾರಿ ಸೋಮಶೇಖರ್ ಎಸ್.ಜಿ. ಸೇರಿದಂತೆ ಚಿಂಚೋಳಿ ಉಪ ಚುನಾವಣೆಗೆ ನೇಮಿಸಲಾಗಿರುವ ವಿವಿಧ ನೋಡೆಲ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here