ಕಲಬುರಗಿ: ಮಾನವ ಕುಲಕ್ಕೆ ಕಂಟಕವಾಗಿರುವ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಸಾಂಘಿಕ ಹೋರಾಟ ಅಗತ್ಯವಾಗಿದೆ ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ ಹೇಳಿದರು.
ಅವರು ಶನಿವಾರ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಜಿಮ್ಸ್, ಇ.ಎಸ್.ಐ.ಸಿ. ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಕೊರೋನಾ ವೈರಸ್ ಕುರಿತು ಜಿಲ್ಲಾಡಳಿತ ಇದೂವರೆಗೆ ಕೈಗೊಂಡ ಕ್ರಮ ಅದರ ಸ್ಥಿತಿಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೋನಾ ತಡೆಗಟ್ಟಲು ಜಿಲ್ಲಾಧಿಕಾರಿ ಶರತ್ ಬಿ. ನೇತೃತ್ವದ ಜಿಲ್ಲಾಡಳಿತವು ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಅವರು ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಯವರು ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ ಜಿಲ್ಲಾಡಳಿತ ನೀಡುವ ಎಲ್ಲಾ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು ಮತ್ತು ರೋಗ ಹರಡದಂತೆ ಎಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಗೆ ಅತೀ ಅವಶ್ಯಕವಾದ ಕೋವಿಡ್-19 ರೋಗ ಪತ್ತೆ ಮಾಡುವ ಪ್ರಯೋಗಾಲಯಕ್ಕೆ ಅಗತ್ಯವಿರುವ ರೀಜೆಂಟ್ ಈಗಾಗಲೆ ಕೇಂದ್ರ ಸರ್ಕಾರದಿಂದ ಬಂದಿರುವುದರಿಂದ ಕೂಡಲೆ ಪ್ರಯೋಗಾಲಯ ರಿಯಲ್ ಟೆಸ್ಟ್ ಆರಂಭಿಸಬೇಕು ಎಂದು ಜಿಮ್ಸ್ ಡೀನ್ ಡಾ.ಕವಿತಾ ಪಾಟೀಲ ಅವರಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ರೋಗಿಗಳ ಚಿಕಿತ್ಸೆಗೆ ಐಸೋಲೇಷನ್ ವಾರ್ಡ್ ಕೊರತೆಯಿಲ್ಲ. ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ಮೆಡಿಸಿನ್, ಅನುದಾನ ಸೇರಿದಂತೆ ಇನ್ನೀತರ ಪೂರಕ ಉಪಕರಣಗಳ ಅಗತ್ಯತೆಯನ್ನು ತಮಗೆ ತಿಳಿಸಿದಲ್ಲಿ ಸರ್ಕಾರ ದೊರಕಿಸಿಕೊಡಲು ಕ್ರಮ ವಹಿಸಲಾಗುವುದು. ಆರೋಗ್ಯ ಸಚಿವರು ಇತ್ತೀಚೆಗೆ ಕಲಬುರಗಿ ಭೇಟಿ ನೀಡಿದಾಗ ಅಗತ್ಯವಿರುವ ಅನುದಾನ ನೀಡುವುದಾಗಿ ತಿಳಿಸಿರುವುದರಿಂದ ಅಧಿಕಾರಿಗಳು ಅನುದಾನದ ಕಾರಣ ನೀಡಿ ಯಾವುದೇ ಕೆಲಸಗಳು ನಿಲ್ಲಿಸಬಾರದು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತು ಕೆಲಸ ಮಾಡಬೇಕು ಎಂದರು.
ಜನರ ಆತ್ಮ ಬಲ ತುಂಬುವಂತಾಗಲಿ: ಕೊರೋನಾ ವೈರಸ್ ವಿಶ್ವವ್ಯಾಪಿ ಹಬ್ಬಿದ್ದರಿಂದ ಜನ ಭಯಭೀತರಾಗಿದ್ದಾರೆ. ಜನ ಸಾಮಾನ್ಯರಲ್ಲಿ ಆತ್ಮ ಬಲ ಹೆಚ್ಚಿಸುವ ಕಾರ್ಯ ಆರೋಗ್ಯ ಇಲಾಖೆಯಿಂದ ನಡೆಯಬೇಕು. ಪ್ರಚಾರ ಕಾರ್ಯದ ಜೊತೆ ಸಾಮಾಜಿಕ ಅಂತರ ಕಾಪಾಡುವುದು, ದೈನಂದಿನ ದೈಹಿಕ ಚಟುವಟಿಕೆಯಿಂದಿರಲು ಮತ್ತು ಉತ್ತಮ ಆಹಾರ ಸೇವಿಸಲು ಸಹ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು
ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ ಕೋವಿಡ್-19 ಪ್ರಯೋಗಾಲಯಕ್ಕೆ ರೀಜೆಂಟ್ ಬಂದಿರುವುದರಿಂದ ತರಬೇತಿ ಪಡೆದ ಸ್ಥಳೀಯ ನುರಿತ ವೈದ್ಯರು ಸ್ಯಾಂಪಲ್ಸ್ ಪರೀಕ್ಷೆಗೆ ಮುಂದಾಗಬೇಕು. ವಿದೇಶದಿಂದ ಬಂದವರ ಮೇಲೆ ತೀವ್ರ ನಿಗಾವಹಿಸಿ. ಜಿಲ್ಲೆಯ ಗ್ರಾಮೀಣ ಭಾಗದಿಂದ ಬರುವ ಜನರು ನಗರ ಪ್ರವೇಶಿಸುವ ಮುನ್ನ ಥರ್ಮಲ್ ಸ್ಕ್ಯಾನರ್ ನಿಂದ ಪರೀಕ್ಷಿಸಬೇಕು ಮತ್ತು ಇದಕ್ಕಾಗಿ ನಗರದ 6 ಕಡೆ ಚೆಕ್ ಪೋಸ್ಟ್ ಸ್ಥಾಪಿಸುವ ಅಗತ್ಯವಿದೆ ಎಂದ ಅವರು ರಾಜ್ಯದಲ್ಲಿ ಹಕ್ಕಿಜ್ವರ, ಸ್ವೈನ್ ಫ್ಲೂ ಪ್ರಕರಣಗಳು ಸಹ ಕಂಡುಬರುತ್ತಿರುವುದರಿಂದ ಇಲ್ಲಿಯೂ ಇದರ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಯೋಗಾಲಯ ಸ್ಥಾಪನೆಗೆ ರೀಜೆಂಟ್ ಬಂದಿರುವುದರಿಂದ ಆಂತರಿಕ ಪ್ರಯೋಗಾತ್ಮಕ ಕೆಲಸಗಳು ನಡೆಯುತ್ತಿವೆ. ಆರೋಗ್ಯ ಇಲಾಖೆಯ ಕೆಲವು ಶಿಷ್ಠಾಚಾರ ಪಾಲನೆಯ ನಂತರ ಸೋಮವಾರ ಅಥವಾ ಮಂಗಳವಾರ ರಿಯಲ್ ಟೈಮ್ ಟೆಸ್ಟ್ ನಡೆಸಲಾಗುತ್ತದೆ. ಪ್ರಯೋಗಾಲಯ ಕಾರ್ಯಾಚರಣೆಗೆ ಐ.ಸಿ.ಎಂ.ಆರ್. ತಂಡ ಎಲ್ಲಾ ತಾಂತ್ರಿಕ ನೆರವು ನೀಡುವುದಾಗಿ ತಿಳಿಸಿದೆ. ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದು, ಇಲ್ಲಿ ಸ್ಕ್ರೀನಿಂಗ್ ಮಾಡಿಯೇ ಜನರನ್ನು ಒಳಗೆ ತೆಗೆದುಕೊಳ್ಳಲಾಗುತ್ತಿದೆ. ಹೋಂ ಕ್ವಾರಂಟೈನ್‍ನಲ್ಲಿದ್ದವರಿಗೆ ಪ್ರವಾಹ ಪರಿಸ್ಥಿತಿಯ ಮಾದರಿಯಲ್ಲಿ ಆಹಾರ ಪೊಟ್ಟಣ ವಿತರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ ಮಾತನಾಡಿ ಜಿಲ್ಲೆಯಲ್ಲಿ ಇದೂವರೆಗೆ 812 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಇವರ ಮೇಲೆ ನಿಗಾ ಇಡಲು 80 ತಂಡ ರಚಿಸಿದೆ. ಇದೂವರೆಗೆ ಜಿಲ್ಲೆಯಲ್ಲಿ 70000 ಮನೆಗಳಿಗೆ ಆರೋಗ್ಯ ಕಾರ್ಯಕರ್ತೆಯರು ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ ಎಂದರು.
ಸಭೆಯಲ್ಲಿ ಡಿ.ಸಿ.ಪಿ. ಕಿಶೋರ ಬಾಬು, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ, ಜಿಲ್ಲಾ ಅರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎ.ಜಬ್ಬಾರ್, ಇ.ಎಸ್.ಐ.ಸಿ. ಮೆಡಿಕಲ್ ಕಾಲೇಜಿನ ಡೀನ್ ಡಾ.ಎ.ಎಲ್.ನಾಗರಾಜ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.