ಕಲಬುರಗಿ: ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಅವರು ತಿಳಿಸಿದರು.
ಬುಧವಾರ ನಗರದ ಅಜಾದಪುರ ರಸ್ತೆಯಲ್ಲಿ ಜನರು ಅಗತ್ಯ ದಿನಸಿ ವಸ್ತುಗಳನ್ನು ಖರೀದಿಸುತ್ತಿರುವ ವಿವಿಧ ಅಂಗಡಿಗಳಿಗೆ ಭೇಟಿ ನೀಡಿದರು.
ಸಾರ್ವಜನಿಕರು ಅಂತರ ಕಾಪಾಡಲು ಅಂಗಡಿಗಳ ಮುಂದೆ ಚೌಕಾಕಾರದ ಪರಿಧಿ ನಿಗದಿಪಡಿಸಿದ್ದು, ಅಲ್ಲಿಯೆ ನಿಂತು ಜನರು ಶಾಂತ ರೀತಿಯಿಂದ ತಮಗೆ ಬೇಕಾದ ವಸ್ತುಗಳನ್ನು ಪಡೆಯಬೇಕು. ಯಾವುದೇ ಕಾರಣಕ್ಕೂ ಜನಸಂದಣಿಗೆ ಅವಕಾಶ ಮಾಡಬಾರದು ಎಂದು ಅವರು ಮನವಿ ಮಾಡಿದರು.
ಅಗತ್ಯ ವಸ್ತುಗಳು, ಸೇವೆ ಇರಲಿವೆ: ಜಿಲ್ಲೆಯಲ್ಲಿ ಕರ್ಫ್ಯೂವಿಧಿಸಿದ್ದರೂ, ಅಗತ್ಯ ವಸ್ತುಗಳು ಹಾಗೂ ಸೇವೆಗಳು ಯಥಾಪ್ರಕಾರ ಮುಂದುವರೆಯಲಿವೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ ತಮಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ವಸ್ತುಗಳನ್ನು ಖರೀದಿಸಬೇಕು. ಅನಗತ್ಯ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಇನ್ನೀತರರಿಗೆ ತೊಂದರೆಯಾಗದಂತೆ ಮಾಡಬಾರದು ಎಂದು ಅವರು ತಿಳಿಸಿದ್ದಾರೆ.
ಸೇಡಂ: ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ದಿನಸಿಗಳು ಮತ್ತು ತರಕಾರಿ ಪಡೆಯಲು ಬರುವ ಸಾರ್ವಜನಿಕರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೇಡಂ ಪೊಲೀಸರಿಂದ ಜಾಗೃತಿ ಮೂಡಿಸುವ ಕಾರ್ಯ ಬುಧವಾರ ನಡೆಯಿತು.
ಕೊರೋನಾ ಸೊಂಕು ಭೀತಿ ಹಿನ್ನೆಲೆಯಲ್ಲಿ ಕರ್ಪ್ಯೂ ಜಾರಿಯಲ್ಲಿರುವ ಕಾರಣ ಪಟ್ಟಣದ ಕಿರಾಣಿ-ತರಕಾರಿ ಅಂಗಡಿಗಳ ಮುಂದೆ ಗುರುತಿಸಿರುವ ಚೌಕಾಕಾರದ ಬಾಕ್ಸ್ ನಲ್ಲಿ ನಿಂತು ಖರೀದಿಸುತ್ತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಸಿ.ಪಿ.ಐ. ರಾಜಶೇಖರ್, ಪಿ.ಎಸ್.ಐ. ಸುನೀಲ ಕುಮಾರ ಮತ್ತು ಅವರ ಪೊಲೀಸ್ ತಂಡ ಕಿರಾಣಿ ಮತ್ತು ತರಕಾರಿ ಅಂಗಡಿಗಳ ಮುಂದೆ ನಿಂತು ಕಾನೂನು ಸುವ್ಯವಸ್ಥೆ ಜೊತೆಗೆ ಸಾಮಾಜಿಕ ಅಂತರ ಕಾಪಾಡಲು ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದ್ದಾರೆ.