ಕಲಬುರಗಿ: ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕಲಬುರಗಿ ನಗರದೆಲ್ಲೆಡೆ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಡಿಸ್ ಇನ್ಫೆಕ್ಷನ್ ಮತ್ತು ಹೈಪೊಫ್ಲೋರೈಡ್ ಔಷಧಿ ಸಿಂಪರಣೆ ಕಾರ್ಯ ಮಾಡುತ್ತಿದ್ದು, ಇದಕ್ಕೀಗ ಅಗ್ನಿಶಾಮಕ ಇಲಾಖೆಯ ಫೈರ್ ತಂಡ ಕೈಜೋಡಿಸಿದೆ.
ಬುಧವಾರ ಕಲಬುರಗಿಯ ಇ.ಎಸ್.ಐ.ಸಿ ಆಸ್ಪತ್ರೆ ಎದುರುಗಡೆ ಇರುವ ಜ್ಞಾನಗಂಗಾ ಕಾಲೋನಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರ ಸೂಚನೆಯಂತೆ ಫೈರ್ ತಂಡ ಫಾಗಿಂಗ್ ಕಾರ್ಯದಲ್ಲಿ ಪಾಲ್ಗೊಂಡರು.
ಇದಕ್ಕು ಮುನ್ನ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಲಕ್ಕಪ್ಪ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ.ಪರಶುರಾಮ ಅವರು ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಅವರೊಂದಿಗೆ ಫಾಗಿಂಗ್ ಕಾರ್ಯ ಕುರಿತಂತೆ ಚರ್ಚಿಸಿದರು.
ಮಹಾಮಾರಿ ಕೊರೋನಾ ಸೊಂಕು ವ್ಯಕ್ತಿಯ ನೇರ ಸಂಪರ್ಕದಲ್ಲಿ ಬರುವವರಿಗೆ ಅಥವಾ ಕೋವಿಡ್-19 ಪಾಸಿಟಿವ್ ಇರುವ ವ್ಯಕ್ತಿ ಕೆಮ್ಮುವುದರಿಂದ ಬರುವ ಡ್ರಾಪ್ಲೆಟ್ ಮುಖಾಂತರ ಇನ್ಬೊಬ್ಬ ವ್ಯಕ್ತಿಗೆ ಸೊಂಕು ಹರಡುತ್ತದೆ.
ಇಂತಹ ಸೊಂಕು ಸಾರ್ವಜನಿಕ ಸ್ಥಳದಲ್ಲಿ ಇನ್ನೊಬ್ಬರಿಗೆ ತಗುಲದಂತೆ ಮುನ್ನೆಚರಿಕೆ ಕ್ರಮವಾಗಿ ಪಾಲಿಕೆಯಿಂದ ನಗರದ ಪ್ರಮುಖ ರಸ್ತೆ, ಬೀದಿ, ಪ್ರದೇಶ, ಆಸ್ಪತ್ರೆ, ಸಾರ್ವಜನಿಕ ಕಚೇರಿಗಳ ಸುತ್ತಮುತ್ತ ಔಷಧಿ ಸಿಂಪರಣೆ ಕಾರ್ಯ ಕಳೆದ ಎರಡ್ಮೂರು ದಿನಗಳಿಂದ ಯುದ್ದೋಪಾದಿಯಲ್ಲಿ ಮಾಡಲಾಗುತ್ತಿದೆ.
ನೀರು, ಫಿನೈಲ್ ಹಾಗೂ ಡೆಟಾಲ್ ಮಿಶ್ರಣವುಳ್ಳ ಡಿಸ್‍ಇನ್‍ಫೆಕ್ಷನ್ ಔಷಧಿ ಮತ್ತು ನೀರು ಮತ್ತು ಬ್ಲೀಚಿಂಗ್ ಪೌಡರ್ ಮಿಶ್ರಣವುಳ್ಳ ಹೈಪೊಫ್ಲೋರೈಡ್ ಸೊಲ್ಯೂಷನ್ ಲಿಕ್ವಿಡ್ ಫಾಗಿಂಗ್ ಮಾಡಲಾಗುತ್ತಿದೆ.