ವಾಡಿ: ಜನರನ್ನು ಬೆಚ್ಚಿಬೀಳಿಸಿರುವ ಕೊರೊನಾ ಸಂಕಟದ ಲಾಕ್‌ಡೌನ್ ಬಂಧನಕ್ಕೆ ಸಿಕ್ಕು ಊಟ ವಸತಿಗಾಗಿ ಪರಿತಪಿಸುತ್ತಿದ್ದ ಮಧ್ಯಪ್ರದೇಶ ಮೂಲದ ಕೂಲಿ ಕಾರ್ಮಿಕರಿಗೆ ವಾಡಿ ನಗರದ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳು ನೆರವಿನ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರೈಲು ಹಳಿ ದುರಸ್ತಿ ಕಾಮಗಾರಿಗೆಂದು ಗುತ್ತಿಗೆದಾರನ ಬೆನ್ನಟ್ಟಿ ವಾಡಿ ನಗರಕ್ಕೆ ಬಂದಿದ್ದ ೨೫ ಜನ ಹೊರ ರಾಜ್ಯದ ಗುಳೆ ಕಾರ್ಮಿಕರು, ಲಾಕ್‌ಡೌನ್ ಘೋಷಣೆಯಿಂದ ಊರಿಗೆ ವಾಪಸ್ ಹೋಗಲಾರದೆ ಪಾಳು ಕಟ್ಟಡದಲ್ಲಿ ಆಶ್ರಯ ಪಡೆದಿದ್ದರು. ಊಟ, ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿಂದ ವಂಚಿತರಾಗಿ ಕತ್ತಲ ಕೂಪದ ಕೋಣೆಯಲ್ಲಿ ಮಲಗಲಾಗದೆ ಮಕ್ಕಳು ಸೊಳ್ಳೆ ಕಡಿತಕ್ಕೆ ಗುರಿಯಾಗಿದ್ದರು. ನೋವು ತಾಳಲಾಗದೆ ತೊಂದರೆ ಅನುಭವಿಸುತ್ತಿದ್ದರು. ರೈಲ್ವೆ ಆರ್‌ಪಿಎಫ್ ಅಧಿಕಾರಿಗಳು ನೀಡುತ್ತಿದ್ದ ಕಿಚಡಿ ಅನ್ನ ತಿಂದು ಉಸಿರಾಡುತ್ತಿದ್ದರು.
ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಲು ಮುಂದಾದ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಅಕ್ಕಿ, ಎಣ್ಣೆ, ಬೇಳೆ, ಗೋದಿ ಹಿಟ್ಟು, ಸೊಳ್ಳೆ ಬತ್ತಿ, ಸಾಬೂನು, ಕ್ಯಾಂಡೆಲ್, ಊಟ, ನೀರಿನ ಬಾಟಲಿ, ಬಿಸ್ಕತ್, ಮಾಸ್ಕ್ ವಿತರಿಸುವ ಮೂಲಕ ಕಾರ್ಮಿಕರ ಕಷ್ಟಕ್ಕೆ ಸ್ಪಂಧಿಸಿದರು. ಮಂಗಳವಾರ ಕಾರ್ಮಿಕರಿರುವ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ವಾಲ್ಮೀಕಿ ನಾಯಕ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಯುವ ಮೋರ್ಚಾ ಅಧ್ಯಕ್ಷ ರವಿ ಕಾರಬಾರಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ನಿವೇದಿತಾ ದಹಿಹಂಡೆ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಯುವ ಮುಖಂಡರಾದ ಕಾಶಿನಾಥ ಶೆಟಗಾರ, ರಿಚ್ಚರ್ಡ್ ಮರೆಡ್ಡಿ, ಕಿಶನ ಜಾಧವ, ಲೋಕೇಶ ರಾಠೋಡ, ರಾಜೇಶ ಕಾಂಬಳೆ, ಮೌನೇಶ ಸೂಲಹಳ್ಳಿ, ಜಗತ್‌ಸಿಂಗ ರಾಠೋಡ ಹಾಗೂ ಲಕ್ಷ್ಮೀಪುರವಾಡಿ ಗ್ರಾಮದ ಯುವಕರು ಆಹಾರ ಸಾಮಾಗ್ರಿ ನೀಡಿ ಮಾನವೀಯತೆ ಮೆರೆದರು.
ಎಐಯುಟಿಯಿಸಿ ಸ್ಪಂದನೆ: ವಲಸಿಗ ಕಾರ್ಮಿಕರನ್ನು ಭೇಟಿ ಮಾಡಿದ ಎಐಯುಟಿಯುಸಿ ಮುಖಂಡರು, ವಲಸಿಗ ಕುಟುಂಬಗಳ ಗೋಳು ಆಲಿಸಿದರು. ಪಾಳು ಕಟ್ಟಡದಿಂದ ಸ್ಥಳಾಂತರಿಸಿ ವಸತಿ ನಿಲಯಗಳಲ್ಲಿ ಆಶ್ರಯ ಒದಗಿಸಲಾಗುವುದು ಎಂದು ಕಾರ್ಮಿಕರ ಸ್ಥಳಕ್ಕೆ ಭೇಟಿ ನೀಡಿದ ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಮುಖಂಡರಾದ ಶರಣು ಹೇರೂರ, ವಿಠ್ಠಲ ರಾಠೋಡ, ಯೇಶಪ್ಪ ಕೇದಾರ ಭರವಸೆ ನೀಡಿದರು.
ಆರೋಗ್ಯ ತಪಾಸಣೆ: ಮಧ್ಯಪ್ರದೇಶ ಮೂಲಕ ಕೂಲಿ ಕಾರ್ಮಿಕರ ಕುಟುಂಬಕ್ಕೆ ನಿತ್ಯ ಊಟ ಸರಬರಾಜು ಮಾಡುವ ಭರವಸೆ ನೀಡಿದ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ, ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಿದರು. ಎಸಿಸಿ ಎಆರ್‌ಟಿ ಸೆಂಟರ್‌ನ ಡಾ.ಸಂಜಯ ಅಳ್ಳೊಳ್ಳಿ ಅವರು ಕಾರ್ಮಿಕರ ಕುಟುಂಬ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದರು. ಕೊರೊನಾ ವೈರಸ್ ಹರಡದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು. ಸಮುದಾಯ ಸಂಘಟಕ ಕಾಶಿನಾಥ ಧನ್ನಿ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಎಸಿಸಿ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೆದಲಾ, ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ, ವಿಜಯಕುಮಾರ ಸಿಂಗೆ, ಶ್ರವಣಕುಮಾರ ಮೌಸಲಗಿ, ನಾಗೇಂದ್ರ ಜೈಗಂಗಾ ಪಾಲ್ಗೊಂಡಿದ್ದರು.