ಕಲಬುರಗಿ: ಕೊರೋನಾ ಸಾಂಕ್ರಾಮಿಕ ಸೋಂಕು ಹರಡದಂತೆ ಜನಸಂದಣಿ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಸಾರ್ವಜನಿಕರು ಅನಗತ್ಯ ರಸ್ತೆ ಮೇಲೆ ಓಡಾಡಿದರೆ ಅಂತಹವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಸುಮಾರು ೨೦೦ಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿರುವ ಕೊರೋನಾ ಸೋಂಕಿಗೆ ಇದೂವರೆಗೆ ವಿಶ್ವದಲ್ಲಿ ೧ ಲಕ್ಷ ಜನ ಮೃತಪಟ್ಟಿದ್ದು, ೧೭ ಲಕ್ಷ ಜನ ಕೋವಿಡ್-೧೯ ಸೋಂಕಿತರಾಗಿದ್ದಾರೆ. ಕೊರೋನಾ ಸೋಂಕು ಗುಣಪಡಿಸಲು ಯಾವುದೇ ಔಷಧಿಯಿಲ್ಲ. ಮನೆಯಿಂದ ಹೊರಬಾರದಿರುವುದೇ ದಿವ್ಯೌಷಧಿಯಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ತಮ್ಮ ಜೀವನ ಲೆಕ್ಕಿಸದೆ ಪೊಲೀಸ್, ವೈದ್ಯರು, ಅಶಾ-ಅಂಗನವಾಡಿ ಕಾರ್ಯಕರ್ತೆಯರು, ಅಧಿಕಾರಿ ವರ್ಗ ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಪಾಲಿಸುವ ಮೂಲಕ ಜಿಲ್ಲಡಳಿತಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಲಬುರಗಿ ಜಿಲ್ಲೆಯಲ್ಲಿ ಶನಿವಾರ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ೧೧ಕ್ಕೆ ಏರಿದೆ. ೬೭೩ ಜನ ೧೪ ದಿನಗಳ ಗೃಹ ಬಂಧನ ಮತ್ತು ಸ್ವಯಂ ಆರೋಗ್ಯ ವರದಿ ನೀಡಲು ೨೮ ದಿನಗಳ ಗೃಹ ಬಂಧನ ಪೂರೈಸಿದ್ದಾರೆ. ೨೭೫ ಜನ ಸ್ವಯಂ ಆರೋಗ್ಯ ವರದಿ ನೀಡಲು ತಿಳಿಸಲಾಗಿದೆ. ೬೨೭ ಜನ ೧೪ ದಿನದ ಗೃಹ ಬಂಧನದಲ್ಲಿದ್ದಾರೆ ಎಂದರು.
೨೮೦೦೦ ಜನ ಬೆಂಗಳೂರಿನಿಂದ, ೨೧೫೧೮ ಜನ ಹೊರ ರಾಜ್ಯ ಮತ್ತು ದೇಶಗಳಿಂದ ಬಂದಿದ್ದಾರೆ. ಇದರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಂಡುಬಂದಿರುವ ಮಹಾರಾಷ್ಟ್ರದಿಂದ ೧೫೭೪೦ ಮತ್ತು ದೆಹಲಿಯಿಂದ ೩೮ ಹಾಗೂ ಬೇರೆ ಪ್ರದೇಶದಿಂದ ೮ ಜನರ ಆಗಮಿಸಿದ್ದು, ಅವರೆಲ್ಲರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಿವರಿಸಿದರು.
ರೋಗಿಗಳಿಗೆ ಚಿಕಿತ್ಸೆ ನೀಡಿ: ಕೋವಿಡ್-೧೯ ನೆಪವೊಡ್ಡಿ, ಕಿಡ್ನಿ, ಮಧುಮೇಹ, ಹೃದ್ರೋಗ ಸೇರಿದಂತೆ ಇತರೆ ಬೇರೆ ರೋಗಿಗಳು ಅಸ್ಪತ್ರೆಗೆ ಬಂದಾಗ ವೈದ್ಯರು ಸೂಕ್ತ ಚಿಕಿತ್ಸೆ ನೀಡಬೇಕು. ಕೋವಿಡ್-೧೯ ಭಯದಿಂದ ಎಲ್ಲಾ ರೋಗಿಗಳನ್ನು ಚಿಕಿತ್ಸೆಗೆ ನಿರಾಕರಿಸಿ ವಾಪಸ್ಸು ಕಳುಹಿಸಬಾರದು. ಈ ರೀತಿ ರೋಗಿಗಳಿಗೆ ಚಿಕಿತ್ಸೆ ನೀಡದೆ ತಮ್ಮ ವೃತ್ತಿ ಧರ್ಮ ಪಾಲಿಸದ ಆಸ್ಪತ್ರೆಗಳ ವಿರುದ್ಧ ಆರೋಗ್ಯ ತರ್ತು ಪರಿಸ್ಥಿತಿ ಕಾಯ್ದೆಯಡಿ ಜಿಲ್ಲಾ ಆರೋಗ್ಯ ಮತು ಕುಟುಂಬ ಕಲ್ಯಾಣಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಾದ್ಯಂತ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಮತ್ತು ನಿಲಯಗಳಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಗೃಹ ಬಂಧನದಲ್ಲಿರುವ ೪೯೬೩ ಜನರಿಗೆ ಊಟದ ವ್ಯವಸ್ಥೆ ಇಲಾಖೆಯಿಂದಲೆ ಮಾಡಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಖಾತೆಯ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಲೋಕಸಭಾ ಸದಸ್ಯ ಡಾ.ಉಮೇಶ ಜಾಧವ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ, ಜಿಲ್ಲಾಧಿಕಾರಿ ಶರತ್ ಬಿ., ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಜಿಲ್ಲಾ ಪೊಲೀಸ್ ವರಿ?ಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಕಿಶೋರ ಬಾಬು ಇದ್ದರು.