ಬಸವಣ್ಣ ಬರುವುದಕ್ಕಿಂತ ಪೂರ್ವದಲ್ಲಿ ಬದುಕು ನಿಗೂಢವಾಗಿದೆ. ಅದರ ರಹಸ್ಯವನ್ನು ಅರಿಯಬೇಕಾದರೆ ಸುಮ್ಮನೆ ಆಗುವುದಿಲ್ಲ. ಅದಕ್ಕಾಗಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಗಡ್ಡಬಿಟ್ಟು ಗುಡ್ಡ ಸೇರಿದರೆ ಮಾತ್ರ ಬದುಕಿನ ರಹಸ್ಯ ಅರಿಯಬಹುದು. ಅಂದಾಗ ಮಾತ್ರ ಸದ್ಗತಿ ದೊರೆಯಬಲ್ಲುದು ಎಂದು ಹೇಳಿ ಜನರನ್ನು ಮೋಸ ಮಾಡಿಕೊಂಡು ಬರಲಾಗುತ್ತಿತ್ತು. ಪಾಪದ ಕೆಲಸ ಮಾಡಿಯೂ ಪುಣ್ಯ ಪಡೆದುಕೊಳ್ಳುವುದು ಹೇಗೆ? ಸ್ವರ್ಗ ಪ್ರಾಪ್ತಿಗೆ ಏನು ಮಾಡಬೇಕು? ಎಂದು ಇಲ್ಲಸಲ್ಲದ್ದನ್ನು ಹೇಳಿ ಜನರ ಬದುಕಿನ ದಿಕ್ಕು ತಪ್ಪಿಸಲಾಗಿತ್ತು. ಸತ್ತು ಸ್ವರ್ಗ ಸೇರಬೇಕಾದರೆ ಪೂಜಾರಿ, ಪುರೋಹಿತರಿಗೆ ದಾನ, ಧರ್ಮ ಮಾಡಬೇಕು ಎಂಬಿತ್ಯಾದಿಯಾಗಿ ಹೇಳಿಕೊಂಡು ಜನರನ್ನು ಅಜ್ಞಾನದಲ್ಲಿಟ್ಟಿದ್ದರು.
ಧರ್ಮ, ದೇವರ ಹೆಸರಿನಲ್ಲಿ ಜನಸಾಮಾನ್ಯರನ್ನು ಮೋಸ, ಶೋಷಣೆ ಮಾಡುತ್ತಿರುವುದನ್ನು ಚೆನ್ನಾಗಿಯೇ ಗ್ರಹಿಸಿದ್ದ ಶರಣರು ಇದಕ್ಕೆ ತಕ್ಕ ಉತ್ತರ ಕೊಟ್ಟರು. ಇದಕ್ಕಾಗಿ ಅವರು ಬಳಸಿದ ಉಪಮೆಗಳು ಕೂಡ ಬೇರೆಲ್ಲಿಂದಲೋ ಎರವಲು ತಂದವುಗಳಾಗಿರಲಿಲ್ಲ. ನಾವು ದಿನ ನಿತ್ಯ ಬಳಸುವ, ಕಾಣುವ ವಸ್ತು, ವಿಷಯಗಳನ್ನೇ ತಮ್ಮ ವಚನಗಳಲ್ಲಿ ಬಳಸುವ ಮೂಲಕ ಜನರಿಗೆ ಚೆನ್ನಾಗಿ ಮನವರಿಕೆ ಮಾಡಿಕೊಟ್ಟರು.
ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವರು
ವೀರರೂ ಅಲ್ಲ ಧೀರರೂ ಅಲ್ಲ
ಇದು ಕಾರಣ ನೆರೆ ಮೂರು ಲೋಕವೆಲ್ಲವು
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತ
ಬಲ್ಲರೋ
ಅನುಭವ ಮಂಟಪದ ಶೂನ್ಯ ಪೀಠದ ಅಧ್ಯಕ್ಷರಾಗಿದ್ದ ಅಲ್ಲಮಪ್ರಭುಗಳ ಈ ವಚನ ಮೇಲ್ನೋಟಕ್ಕೆ ಬದುಕಿನ ಕುರಿತಾಗಿ ಹೇಳಿದ್ದರೂ ಜನರನ್ನು ದಿಕ್ಕು ತಪ್ಪಿಸುವ ವೈದಿಕಶಾಹಿಗಳಿಗೆ ಸವಾಲೆಸದಂತಿದೆ, ಬದುಕು ಪ್ರಕೃತಿ ಸಹಜ ವರ. ಬದುಕೆಂಬ ಕುದರೆಯ ಬೆನ್ನ ಏರಿ ಚೆನ್ನಾಗಿ ಸವಾರಿ ಮಾಡಬೇಕು. ಕುಣಿಯಲಿಕ್ಕೆ ಬಾರದೆ ನೆಲ ಅಂಕು ಡೊಂಕು ಎನ್ನಬಾರದು. ಕುಣಿಯಲು ಮೊದಲು ಕಲಿಯಬೇಕು. ಅಂದರೆ ಬದುಕೆಂಬ ಕುದುರೆಯನ್ನು ಓಡಿಸುವ ಕಲೆ ಕರಗತ ಮಾಡಿಕೊಳ್ಳಬೇಕು. ಇರುವುದೊಂದೆ ಜನ್ಮ. ಹಲವು ಜನ್ಮಾಂತರಗಳಿಲ್ಲ. ಪ್ರಯಯತ್ನವೂ ಇಲ್ಲಿಯೇ! ಫಲವೂ ಇಲ್ಲಿಯೇ!! ಪ್ರಯತ್ನದಿಂದ ಬದುಕಿನಲ್ಲಿ ಯಶಸ್ಸು ಪಡೆಯಬಹುದೇ ವಿನಃ ಭವಿಷ್ಯವಾಣಿಯಿಂದ ಅಲ್ಲ ಎಂಬುದನ್ನು ಅವರು ತಿಳಿಸಿಕೊಟ್ಟರು.
ಬದುಕಿನ ಸರಳತೆ, ಸಹಜತೆಯನ್ನು ಅರಿಯದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ಸುಲಿಗೆ ಮಾಡುವುದಕ್ಕಾಗಿ ಬದುಕು ದೇವರು ಕೊಟ್ಟ ವರ. ಅದನ್ನು ಅರಿತುಕೊಳ್ಳುವಷ್ಟರಲ್ಲಿ ಸಾವು ಬರುತ್ತದೆ. ಸಾಯುವುದರೊಳಗೆ ಸುಖ ಕಾಣಬೇಕಾದರೆ, ಸತ್ತೂ ಸ್ವರ್ಗ ಸೇರಬೇಕಾದರೆ ನಾವು ಹೇಳಿದ್ದನ್ನು ಪಾಲಿಸಿರಿ ಎಂದು ಮತ್ತೆ ಕೆಲವು ಕಟ್ಟುಪಾಡುಗಳನ್ನು, ಕರ್ಮಾಚರಣೆಗಳನ್ನು ಬೋಧಿಸಿದ್ದರು. ಈ ಕುತಂತ್ರವನ್ನು ಬಯಲಿಗೆಳೆದ ಅಲ್ಲಮಪ್ರಭುಗಳು ಅವರ ಈ ಅರ್ಥವಿಲ್ಲದ ಆಚರಣೆಗಳನ್ನು ಅಲ್ಲಗಳೆದರು ಮಾತ್ರವಲ್ಲ, ನಂಬಲಾರ್ಹವಲ್ಲದ ಊಹಿಸಲಸಾಧ್ಯದ ಇಂಥಹ ಅವೈಚಾರಿಕ, ಅವೈಜ್ಞಾನಿಕ, ಅತಾರ್ಕಿಕ ವಿಚಾರಗಳಿಗೆ ತಮ್ಮ ವಚನಗಳ ಮೂಲಕ ಸಮರ್ಪಕ ಉತ್ತರ ನೀಡಿದ್ದಾರೆ.
ಸತ್ತ ಮೇಲೆ ನಾವು ಒಯ್ಯುವುದು ಏನೂ ಇಲ್ಲ. ಸತ್ತು ಸ್ವರ್ಗ ಸೇರುವುದು ಆಗುವುದಿಲ್ಲ. ಯಾರೂ ಕಾಣದ, ನೋಡದ, ಬರೀ ಭ್ರಮೆಯ ಬೆನ್ನು ಹತ್ತಿ ಬದುಕು ಹಾಳು ಮಾಡಿಕೊಳ್ಳುವುದು ಬೇಡ. ವಸ್ತು ಮೋಹದ ಬೆನ್ನು ಹತ್ತಿ ದುಗುಡ, ದುಮ್ಮಾನ, ದುಃಖದ ಬದುಕು ಮಾಡಿಕೊಳ್ಳುವುದು ಬೇಡ. ಕುದುರೆ ಸವಾರಿಗಾಗಿ ಹಾಕುವ ಕುದುರೆಯ ಮೇಲಿನ ಜೀನು ಮಾತ್ರ ಆ ವೈದಿಕಶಾಹಿಗಳಿಗೆ ಗೊತ್ತು. ಆದರೆ ಅವರಿಗೂ ಕುದುರೆ ಪಳಗಿಸುವ ವಿಧಾನ ಗೊತ್ತಿಲ್ಲ. ಹೀಗಾಗಿ ಕಾಣದ ದೇವರ ಬೆನ್ನು ಹತ್ತಿ ಬದುಕು ಹಾಳು ಮಾಡಿಕೊಳ್ಳದೆ ಸಮಾಜದಲ್ಲೇ ದೇವರನ್ನು ಕಾಣಬೇಕು ಎಂಬುದುನ್ನು ಅವರು ತಿಳಿಸಿಕೊಟ್ಟಿದ್ದಾರೆ.
ಬಳ್ಳಿಗಾವಿಯ ಅನಿಮಿಷ್ಯಾರಣ್ಯ ದೇವಸ್ಥಾನದ ಬಳಿ
ಜೀವಕಾರುಣ್ಯದಿಂದ ಬದುಕನ್ನು ಪ್ರೀತಿಸಿದರೆ ಬದುಕು ಬಂಗಾರವಾಗುತ್ತದೆ. ಬದುಕಿಗೆ ಭವಿಷ್ಯ ಮುಖ್ಯ. ನಮ್ಮ ಹಣೆ ಬರಹವನ್ನು ನಾವೇ ಬರೆದುಕೊಳ್ಳಬೇಕು ವಿನಃ ಇನ್ನೊಬ್ಬರು ಬರೆಯಲು ಬಾರದು ಎಂಬದುನ್ನು ಅವರು ಹೇಳಿಕೊಟ್ಟಿದ್ದಾರೆ. ಮೋಕ್ಷ ಹುಡುಕುತ್ತ ಪ್ರೀತಿಯ ಬಂಧನದಲ್ಲಿ ಸಿಲುಕಿದ ಬುದ್ಧ ಕೂಡ ಬದುಕನ್ನು ಅಲ್ಲಗಳೆಯಲಿಲ್ಲ. ಆಸೆಯೇ ದುಃಖಕ್ಕೆ ಮೂಲ. ಶಾಂತಿ, ಸೌಹಾರ್ದ ಗುಣಗಳೇ ನಮ್ಮ ಬದುಕನ್ನು ಕಾಪಾಡುತ್ತದೆ ಎಂದು ಹೇಳಿದ್ದಾರೆ.
ಹುಟ್ಟು-ಸಾವುಗಳನ್ನು ಮೀರಿದ ಪ್ರಜ್ಞೆ ಹೊಂದಿದ್ದ ಶರಣರು, ಸರಳ, ಸಹಜ, ಸಂತೃಪ್ತ ಜೀವನ ನಡೆಸಬೇಕು. ಒಳ-ಹೊರಗು ಒಂದಾಗಿ ಇರಬೇಕು. ಅಂದಾಗ ಈ ಬದುಕು ನಶ್ವರ ಅನಿಸದೆ, ಬದುಕು ನಿಶ್ಚಿತ, ನಿಶ್ಚಿಂತ ಅನಿಸುತ್ತದೆ. ಕಾಯಕ, ದಾಸೋಹದ ಮೂಲಕ ಬದುಕಿಗೆ ಬೆಲೆ ತಂದುಕೊಳ್ಳಬೇಕು ಎಂಬ ವಾಸ್ತವ ಪ್ರಜ್ಞೆಯನ್ನು ಅವರು ತುಂಬಿದರು.
ಅಲ್ಲಮಪ್ರಭುಗಳ ವಚನವನ್ನು ಓದುತ್ತಾ ಓದುತ್ತಾ ಹೋದಂತೆಲ್ಲಾ ನಮ್ಮ ಜೀವನದ ದಾರಿಯನ್ನು ತೋರಿಸುವ ಮುಖ್ಯ ಹೆದ್ದಾರಿ ಯನ್ನು ತೋರಿಸುವ ದ್ವೀಪದ ಕಂಬಗಳಿದ್ದಂತೆ ಅನ್ನಿಸುವದು. ನಿಮ್ಮ ಈ ಮೀಡಿಯಾ ನಮ್ಮ ಹೃದಯ ಮೀಡಿಯವಾಗಿದೆ.