ಕಲಬುರಗಿ: ಇಲ್ಲಿನ ಬನಾಳೆ ಆಸ್ಪತ್ರೆಗೆ ಸುರಪುರದಿಂದ ಆಗಮಿಸಿದ್ದ ತುಂಬು ಗರ್ಭಿಣಿಯ ಆರೋಗ್ಯ ತಪಾಸಣೆಗಾಗಿ ವೈದ್ಯರ ಸಲಹೆಯ ಮೇರೆಗೆ ಸ್ಕ್ಯಾನಿಂಗ್ ಮಾಡಿಸಲು ಯಾವುದೇ ವಾಹನ, ಅಂಬುಲೆನ್ಸ್ ಸಿಗದೇ ಸಂಭಂದಿಕರು ಆಸ್ಪತ್ರೆಯ ಮುಂದೆ ದಿಕ್ಕುತೋಚದೆ ನಿಂತು ಪರದಾಡುವ ಸಂದರ್ಭದಲ್ಲಿ ಜೇವರ್ಗಿ ತಾಲ್ಲೂಕಾ ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ ಜೇರಟಗಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿ ಮಾನವೀಯತೆ ಮೆರದಿದ್ದಾರೆ.
ತಮ್ಮ ಕರ್ತವ್ಯ ಮುಗಿಸಿ ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ತೆರಳುವ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ತಮ್ಮ ವಾಹನ ನಿಲ್ಲಿಸಿ ಆಸ್ಪತ್ರೆಯವರು ಅಂಬುಲೆನ್ಸ್ ಒದಗಿಸಿಕೊಡದಿರುವುದನ್ನು ಖಂಡಿಸಿ ತಮ್ಮ ವಾಹನದಲ್ಲಿಯೆ ಗರ್ಭಿಣಿ ಗೆ ಕರೆದುಕೊಂಡು ಹೋಗಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ.
ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಮಾನವೀಯತೆ ಯನ್ನು ಮೆರೆದು ಗರ್ಭಿಣಿಯ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ತೋರಿಸುವ ಮೂಲಕ ವೈದ್ಯರು ದೇವರ ಇನ್ನೊಂದು ರೂಪ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಅವರ ಸಹಾಯವನ್ನು ಕುಟುಂಬದ ಸದಸ್ಯರಾದ ನಾಗರಾಜ ಗೋಗಿ, ಮಲ್ಲಿಕಾರ್ಜುನ ಗೋಗಿ ಸಂಬಂಧಿಕರಾದ ಶ್ರೀಶೈಲ ಗಂವ್ಹಾರ ಮೊದಲಾದವರು ಕೃತಜ್ಞತೆ ಸಲ್ಲಿಸಿ ಕೊಂಡಾಡಿದ್ದಾರೆ.