ಮನಕ್ಕಂಟಿದ ಮೈಲಿಗೆ ತೊಳೆದ ಮಡಿವಾಳ ಮಾಚಿದೇವ

0
296

ಬಸವಾದಿ ಶರಣರು ಜ್ಯೋತಿಷ್ಯ, ಯಂತ್ರ-ತಂತ್ರ, ಮೂಢನಂಬಿಕೆಗಳನ್ನು ವಿರೋಧಿಸಿದರು. ಅವರು ಬದುಕಿದ್ದು ಹಾಗೂ ಬೋಧಿಸಿದ್ದು ಪ್ರಕೃತಿ ಧರ್ಮವನ್ನು. ಪ್ರಕೃತಿಯು ಭೂಮಿ, ನೀರು, ಅಗ್ನಿ, ಗಾಳಿ, ಆಕಾಶ, ಸೂರ್ಯ, ಚಂದ್ರ, ಅಧ್ಯಾತ್ಮ ಶಕ್ತಿಯಿಂದ ಕೂಡಿದೆ ಎಂದು ಹೇಳುವಂತೆ ಬಸವಣ್ಣನವರು ಸಹ ಮನುಷ್ಯನಿಗೆ ಅಷ್ಟ ಆವರಣಗಳನ್ನು ಕೊಟ್ಟಿದ್ದಾರೆ. ಆವರಣ ಎಂದರೆ ಚೌಕಟ್ಟು ಹಾಕುವುದು ಅಲ್ಲ. ಚೌಕಟ್ಟಿನಲ್ಲಿ ಇರುವುದು ಎಂದರ್ಥ. ಈ ಭೂಮಿಯನ್ನು ಐದು ಹೆಡೆಯ, ಏಳು ಹೆಡೆಯ ಸರ್ಪ ಹೊತ್ತಿದೆ ಎಂಬ ಕಲ್ಪನೆ ಸುಳ್ಳು. ಹಾವು ಗಾಳಿಯನ್ನೇ ಆಹಾರವಾಗಿಸಿಕೊಂಡು ಬದುಕಬಲ್ಲದ್ದರಿಂದ ಹಾಗೆ ಕಥೆ ಕಟ್ಟಿ ಹೇಳಲಾಗುತ್ತಿದೆ. ಭೂಮಿಯ ಕೆಳಗೆ ನೀರು, ಅದರ ಕೆಳಗೆ ಅಗ್ನಿ ಇದ್ದು ಗಾಳಿಯೇ ಭೂಮಿಯನ್ನು ರಕ್ಷಣೆ ಮಾಡುತ್ತದೆ. ಭೂಮಿಯನ್ನು ಅಲ್ಲಾಡಿಸುವ ಶಕ್ತಿ ಗಾಳಿಗೆ ಇದೆ.

ಈ ವೈಜ್ಞಾನಿಕ ಸತ್ಯವನ್ನು ಅರಿತಿದ್ದ ಶರಣರು ಗಾಳಿಯನ್ನು “ಪ್ರಾಣವಾಯು” ಎಂದು ಕರೆದಿದ್ದಾರೆ. ವಿಜ್ಞಾನ ಹೊಟ್ಟೆ ಪಾಡಿಗೆ ಆಗಬಾರದು. ಬದುಕಿಗಾಗಿ ವಿಜ್ಞಾನ ಆಗಬೇಕು. ವಿಜ್ಞಾನ ತತ್ವ ಮತ್ತು ಪ್ರಕೃತಿ ತತ್ವ ಒಳಗೊಂಡಿರುವುದೇ ಬಸವ ಧರ್ಮ. ಕಾವಿ ತೊಟ್ಟವ ಗುರುವಲ್ಲ. ಅರಿವು ನೀಡುವಾತ ಗುರು. ಶಾಪ ಕೊಡುವಾತ ಗುರುವಲ್ಲ. ತಾಪ ಕಳೆಯುವವನು ಗುರು. ಕಣ್ಣು ಕೊಡುವಾತ ಗುರುವಲ್ಲ. ಕಣ್ಣಿನ ಪೊರೆ ಕಳಚುವಾತ ಗುರು. ಪ್ರಕೃತಿಯ ಕೂಸು ಈ ದೇಹಿ. ಮೊದಲು ಪ್ರಕೃತಿಯನ್ನು ಪೂಜಿಸಬೇಕು. ಗುರು ವ್ಯಕ್ತಿಯಲ್ಲ. ಗುರು ಕರುಣೆ, ಸತ್ಕಲೆ, ಶಾಸ್ತ್ರ ಪರಿಣತ, ಹಸನ್ಮುಖಿ, ಸುಗುಣ ಆಗಿರಬೇಕು ಎಂಬುದು ಶರಣರ ಇಂಗಿತ.

Contact Your\'s Advertisement; 9902492681
ವಾಯು ಗುಣ ಸರ್ಪ ಬಲ್ಲದು
ಮಧುರ ಗುಣವನಿರುಹೆ ಬಲ್ಲದು
ವೇಳೆಯ ಗುಣವ ಕೋಳಿ ಬಲ್ಲದು
ಇದು ಕಾರಣ ಮನುಷ್ಯ ಜನ್ಮದಲ್ಲಿ ಬಂದು
ಶಿವಜ್ಞಾನವನ್ನರಿಯದಿದ್ದರೆ ಆ ಕಾಗೆ ಕೋಳಿಗಳಿಂದ
ಕರಕಷ್ಟ ಕಾಣಾ ಕಲಿದೇವರ ದೇವ

ಶಿವಶರಣರ ಹಾಗೂ ಕಾಯಕದಲ್ಲಿ ನಿಷ್ಠೆಯುಳ್ಳ ಮೈಲಿಗೆಯ ಬಟ್ಟೆಗಳನ್ನು ಮಡಿ ಮಾಡಿ ಮುಟ್ಟಿಸುವ ಕಾಯಕ ಮಾಡುತ್ತಿದ್ದ ಮಡಿವಾಳ ಮಾಚಿದೇವರು ಮಡಿ ಬಟ್ಟೆ ಹೊತ್ತುಕೊಂಡು ವೀರಗಂಟೆ ಬಾರಿಸುತ್ತ, ಭಕ್ತರಲ್ಲದವರು ತಮ್ಮನ್ನು ಮುಟ್ಟಬಾರದು ಎಂಬ ಷರತ್ತನ್ನು ವಿಧಿಸಿಕೊಂಡಿದ್ದರು. “ಅರಸುತನ ಮೇಲಲ್ಲ. ಅಗಸತನ ಕೀಳಲ್ಲ” ಎಂಬುದನ್ನು ಜನಕ್ಕೆ ಸಾರಿದರು. ಬಟ್ಟೆಗೆ ಅಂಟಿದ ಕೊಳೆ ತೊಳೆಯುವುದರ ಜೊತೆಗೆ ಮನದ ಮೈಲಿಗೆ ತೊಳೆಯುವ ಮಡಿವಾಳ ಕಾಯಕ ಮಾಡುತ್ತಿದ್ದರು. ಅಂತೆಯೇ ಇವರನ್ನು “ಕಾಯಕ ಹಿಮಾಚಲ”ಎಂದು ಕರೆಯಲಾಗುತ್ತದೆ.
ಹಾವು ಆಹಾರವಿಲ್ಲದೆ ಕೇವಲ ಗಾಳಿ ಮೂಲಕವೇ ಹಲವು ದಿನ ಬದುಕಬಲ್ಲುದು.

ಇರುವೆಗೆ ಮಧುರ ಗುಣ ಗೊತ್ತು. ಕೋಳಿಗೆ ಸಮಯ ಗೊತ್ತು. ಅದೇರೀತಿಯಾಗಿ ಮನುಷ್ಯನಾಗಿ ಹುಟ್ಟಿದ ಮೇಲೆ ಶಿವಜ್ಞಾನವನ್ನು ಅರಿಯಲೇಬೇಕು. ಶಿವಜ್ಞಾನವೆಂದರೆ ಕೈಲಾಸವಾಸಿ ಎಂದು ಹೇಳಲಾಗುವ ನೀಲದೇಹಿಯ ಜ್ಞಾನವಲ್ಲ. ಶಿವತತ್ವ ಎಂದರೆ ಬದುಕಿಗೆ ಬೆಳಕಾಗಬಲ್ಲ ಶುಭತತ್ವ. ಬಸವ ಪೂರ್ವದಲ್ಲಿ ಗುರು ವ್ಯಕ್ತಿಯಾಗಿದ್ದ. ಬಸವಣ್ಣ “ಅರಿವೇ ಗುರು” ಎಂದು ಕರೆದರು. ಆತನಿಗೆ ಕೆಲವು ಗುಣಲಕ್ಷಣಗಳನ್ನು ಇಟ್ಟರು. ಬ್ರಹ್ಮ, ವಿಷ್ಣು, ಮಹೇಶ್ವರನನ್ನು ಪೂಜಿಸುವ ನಾವು ಅವುಗಳ ರಚನಾ ಸಾಮರ್ಥ್ಯವನ್ನು ಮೊದಲು ಅರಿಯಬೇಕು. ಬ್ರಹ್ಮ ಅಂದರೆ ಸೃಷ್ಟಿಸುವಾತ, ವಿಷ್ಣು ಅಂದರೆ ಸಲಹುವಾತ. ಮಹೇಶ್ವರ ಅಂದರೆ ಲಯ ಮಾಡುವ ಶಕ್ತಿ ಎಂದರ್ಥ. ಈ ಶಕ್ತಿಗಳು ಮನುಷ್ಯನಲ್ಲಿಯೇ ಅಡಗಿವೆ ಎಂದು ತೋರಿಸಿದವರು ನಮ್ಮ ಶರಣರು.

ಅನುಕರಣೆಯ ಧರ್ಮ ಅಪಾಯಕಾರಿ ಎಂದು ಹೇಳಿದ ಶರಣರು, ವಿಜ್ಞಾನ ಸಮ್ಮತ, ದೇಹ ಧರ್ಮವನ್ನು ದಯಪಾಲಿಸಿದರು. ಬಸವ ಧರ್ಮ ಕೇವಲ ಜ್ಞಾನದ ಧರ್ಮ ಅಲ್ಲ. ಅದು ಸುಜ್ಞಾನದ ಧರ್ಮ. ಬಸವ ಧರ್ಮ ಕೇವಲ ಭಕ್ತರ ಧರ್ಮ ಅಲ್ಲ. ಅದು ಸದ್ಭಕ್ತರ ಧರ್ಮ. ಖರ್ಚಿಲ್ಲದ ಧರ್ಮ, ಪೂಜಾರಿ ಪುರೋಹಿತರಿಲ್ಲದ ಧರ್ಮ. ಭಯವಿಲ್ಲದ, ಭವವಿಲ್ಲದ ಧರ್ಮ ಅದು.

ರಾಜಪ್ರಭುತ್ವ ಶರಣರ ಕ್ರಾಂತಿಯ ವಿರುದ್ಧ ದನಿ ಎತ್ತಿದಾಗ ಶರಣರ ಕುಲ ನಾಶ ಮಾಡಬೇಕು ಅನ್ನುವ ಸಂದರ್ಭ ಒದಗಿಬಂದಾಗ ಕ್ರಾಂತಿಕಾರಿ ಹೆಜ್ಜೆಯನಿಡುವ ಮೂಲಕ ಶರಣರನ್ನು ಉಳಿಸಿದ ಮಹಾವೀರ ಮಡಿವಾಳ ಮಾಚಿದೇವರು “ಅಗಸ ನೀರೊಳಗಿದ್ದು ಸತ್ತಂತೆ” ಎಂಬಂತಹ ಪಕ್ಕಾ ಪ್ರಯೋಗಾತ್ಮಕ ವಿಚಾರಗಳನ್ನು ಹೊರ ಹಾಕುವ ಮೂಲಕ ತನ್ನ ಅಸ್ಮಿತೆ ಮತ್ತು ಅಸ್ತಿತ್ವನ್ನು ರುಜುವಾತು ಪಡಿಸಿದವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here