ಕೊರೋನಾ ಭಯ..ಲಾಕ್‌ ಡೌನ್  ವಿಸ್ತರಣೆ ಅನಿವಾರ್ಯ..

0
57
ಭಾರತ ಅಷ್ಟೇ ಅಲ್ಲದೇ ಜಗತ್ತು ಕೂಡ ಇಂತಹ ಬಿಕ್ಕಟ್ಟಿನ ದುಸ್ಥಿತಿ ಎದುರಿಸುತ್ತದೆ ಎಂದು ಬಹುಶಃ ಯಾರೊಬ್ಬರೂ ಊಹಿಸಿಕೊಳ್ಳಲಿಲ್ಲ‌. ಮನುಷ್ಯನ ಆಧುನಿಕತೆಯ ಜೀವನ ಶೈಲಿಯ ಧಿಮಾಕಿನ ಆತುರಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. ಕೊರೋನಾ ವೈರಾಣು ಇಡೀ ವಿಶ್ವವನ್ನೆ ತಲ್ಲಣಗೊಳಿಸಿರುವುದು ನಮ್ಮ ಕಣ್ಣೆದುರಿಗಿರುವ ಸತ್ಯ. ಆದರೆ ವಾಸ್ತವಾಂಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಸುಳ್ಳು ವರದಿ, ವದಂತಿಗಳಿಗೆ ಕಿವಿಗೊಟ್ಟು, ಗೊಂದಲಕ್ಕೊಳಗಾಗಿ ಭಯದ ವಾತಾವರಣದಲ್ಲಿ ಬದುಕುತ್ತಿರುವವರೇ ಹೆಚ್ಚು. ಎಲ್ಲರಿಗೂ ಕಾಯಿಲೆಯ ಬಗ್ಗೆ ಸ್ವಲ್ಪಮಟ್ಟಿನ ಭಯವಿರುವುದು ಒಳ್ಳೆಯದೇ ಆದರೆ ಅತಿಯಾದ ಭಯವೇ ಇನ್ನಷ್ಟು ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಜೊತೆಗೆ ಮಾನಸಿಕ ಖಿನ್ನತೆಗೆ ಒಳಪಡುವಂತೆ ಮಾಡುತ್ತದೆ ಎಂಬುದು ಕೂಡ ನಮಗೆ ಪ್ರಜ್ಞೆ ಇರಬೇಕು.
ಮೊದಲಿಗೆ ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ನಂತರದ ದಿನಗಳಲ್ಲಿ ಜಗತ್ತಿನ ಸುಮಾರು 200ಕ್ಕೂ ಅಧಿಕ ದೇಶಗಳಿಗೂ ಹರಡಿದೆ. ಕೊರೋನಾ ಎನ್ನುವ ಮಹಾಮಾರಿ ವೈರಸ್ ಈಗ ‘ಚೀನಾ ವೈರಸ್’ ಎಂದು ಕರೆಸಿಕೊಳ್ಳುತ್ತಿದೆ. ಹೌದು, ಕೊರೋನಾ ವೈರಸ್ ವಿಷಕಾರಿ ಹಾಗೂ ಕ್ಷಿಪ್ರಗತಿಯಲ್ಲಿ  ಹರಡುವ ಅಪಾಯಕಾರಿ ವೈರಾಣು ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ‌. ಈಗಾಗಲೇ ಚೀನಾ , ಅಮೆರಿಕ, ಇಟಲಿ, ಜರ್ಮನಿ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಕೊರೋನಾ ಪಿಡುಗನ್ನು ಎದುರಿಸುವಲ್ಲಿ ಸೋತಿವೆ‌. ಇನ್ನೂ ಭಾರತಕ್ಕೂ ಆವರಿಸಿದ ಕೊರೋನಾ ದೇಶವನ್ನು ಒಮ್ಮೆ ಮೌನಕ್ಕೆ ಜಾರುವಂತೆ ಮಾಡಿದೆ.
ಭಾರತದಲ್ಲಿ ವ್ಯಾಪಕವಾಗಿ ಹರಡುವ ಮುನ್ಸೂಚನೆ ಯನ್ನು ಕಂಡ ಸರ್ಕಾರ ಮುಂಜಾಗ್ರತೆಯಿಂದ ಕೊರೋನಾ ವೈರಾಣುವನ್ನು ನಿಯಂತ್ರಿಸಲು ದೇಶದ ಪ್ರಧಾನಿಗಳು ಮೊದಲಿಗೆ ‘ಜನತಾ ಕರ್ಪ್ಯೂ’ಗೆ ಕರೆ  ನೀಡಿದರು. ಸಕರಾತ್ಮಕವಾಗಿ ಬೆಂಬಲಿಸಿದ ಜನತೆ ‘ಜನತಾ ಕರ್ಪ್ಯೂ’ ಯಶಸ್ಸುಗೊಳಿಸಿದರು. ನಂತರದ ದಿನಗಳಲ್ಲಿ 21ದಿನಗಳ ಕಾಲ ದೇಶಕ್ಕೆ ಲಾಕ್ ಡೌನ್ ಆದೇಶಿಸಿದರು. ಪ್ರಧಾನಿಗಳ ಆದೇಶವನ್ನು ಮೀರದ ದೇಶದ ಜನತೆ ಗೃಹ ಬಂಧನಕ್ಕೆ ಒಳಪಟ್ಟು ತಮ್ಮ ಕರ್ತವ್ಯ ಪೂರೈಸುತ್ತಿದ್ದಾರೆ. ದೂರದ ನಗರಗಳಿಗೆ ವಲಸೆ ಹೋದ ಕೂಲಿಕಾರ್ಮಿಕರು ದಿಕ್ಕು ತೋಚದೆ ತವರೂರಿನ ಕಡೆ ಬರುವಂತಹ ಅನಿವಾರ್ಯತೆ ಎದುರಾಗಿದೆ. ಕೊರೋನಾ ತಡೆಯಲು ಈಗ ದೇಶದ ಜನತೆ ಗ್ರಹದಿಗ್ಭಂಧನದಲ್ಲಿದ್ದು ಸರ್ಕಾರದ ಆದೇಶ ಪಾಲಿಸುತ್ತಿದ್ದಾರೆ.
ಕೊರೋನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ವೈದ್ಯರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ನಾವೆಲ್ಲರೂ ಕೃತಜ್ಞರಾಗಿ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಬೆಂಬಲ ನೀಡುತ್ತಿದ್ದೇವೆ. ಇವರಿಗೆ ಸರ್ಕಾರ ಕೂಡ ಹೆಚ್ಚಿನ ಭದ್ರತೆ ಒದಗಿಸುವ ಕಾರ್ಯ ಮಾಡಬೇಕಾಗಿದೆ. ಮನೆಯಲ್ಲಿ ಬಂಧಿಯಾಗಿರುವ ಎಲ್ಲರೂ ಕೊರೋನಾ ನಿಯಂತ್ರಣಕ್ಕೆ ಕೈಜೋಡಿಸಿದ್ದಾರೆ. ಈ ಕೊರೊನಾ ವಿಪತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಉದ್ಯಮಿಗಳು, ಸಂಘ,‌ಸಂಸ್ಥೆಗಳು ಕೈಜೋಡಿಸಿ ‌ಸಹಕಾರ ನೀಡುತ್ತಿದ್ದಾರೆ. ಇದೆಲ್ಲವೂ ಮಾನವೀಯತೆಯ ಕಾರ್ಯ ಎಂದು ನಾವೆಲ್ಲರೂ ಕೃತಜ್ಞತೆಗಳು ಹೇಳೋಣ.
-ಬಾಲಾಜಿ ಕುಂಬಾರ, ಚಟ್ನಾಳ
ಸಾಹಿತಿ, ಅಂಕಣಕಾರ, ಬೀದರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here