ನಾವೆಲ್ಲ ಚೆನ್ನಾಗಿ ಬದುಕಬೇಕು. ಸಮಸ್ಯೆಗಳಿಲ್ಲದ ಬದುಕು ನಮ್ಮದಾಗಬೇಕು. ದುಃಖ ದುಮ್ಮಾನಗಳು ಬಾರದೆ ಸಡಗರ ಸಂಭ್ರಮದಿಂದ ಜೀವನ ಸಾಗಿಸಬೇಕೆಂಬ ಹಂಬಲವುಳ್ಳವರಾಗಿದ್ದೇವೆ. ಏರಿಳಿತಗಳಿಗೆ ಪಕ್ವಗೊಳ್ಳದೆ, ಕಷ್ಟ ನಷ್ಟಗಳಿಗೆ ಹಣ್ಣಾಗದೆ, ದ್ವೇಷಾಸೂಹೆಗಳಿಗೆ ಒಳಗಾಗದೆ ಜೀವನದ ಅವಧಿ ಪೂರ್ತಿಗೊಳಿಸಬೇಕಾದರೆ ಕಾಲದೊಂದಿಗೆ, ಋತುಗಳೊಂದಿಗೆ ಪರಿಸರದೊಂದಿಗೆ ಅಷ್ಟೇ ಅಲ್ಲ ಪತಿ, ಪತ್ನಿಯರೊಂದಿಗೆ,ಅಣ್ಣ ತಮ್ಮಂದಿರೊಂದಿಗೆ ಸಂಬಂಧಿಕರೊಂದಿಗೆ ಸ್ನೇಹಿತರೊಂದಿಗೆ ಹೊಂದಾಣಿಕೆಯಿಂದ ಬಾಳಬೇಕಾಗುತ್ತದೆ.
ಹೊಂದಿಕೊಂಡು ಹೋದವರು ಉಳಿಯುತ್ತಾರೆ. ಇಲ್ಲದಿದ್ದರೆ ಅಳಿಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ದೈತ್ಯ ಪ್ರಾಣಿ “ಡೈನೋಸಾರ್” ಮತ್ತು “ಡೋ- ಡೋ” ಹಕ್ಕಿಗಳು. ಅವು ಪರಿಸರದೊಂದಿಗೆ ಹೊಂದಿಕೊಂಡು ಬಾಳದ್ದರಿಂದ ಅಳಿದು ಹೋದವು. ಆದರೆ ಅತಿ ಸಣ್ಣ ಜೀವಿಯಾದ ಇರುವೆ ಹೊಂದಿಕೊಂಡಿದ್ದರಿಂದ ಇಲ್ಲಿವರೆಗೆ ಬದುಕುಳಿದವು.
ಹೊಂದಾಣಿಕೆ ಬದುಕಿನಲ್ಲಿ ಬಹು ಮುಖ್ಯ ಮಹತ್ವದ ಪಾತ್ರ ವಹಿಸುತ್ತದೆ. ಸಂಕೀರ್ಣ ಜೀವನ ಪದ್ಧತಿ, ಸ್ಪರ್ಧಾತ್ಮಕ ಒತ್ತಡದ ಬದುಕಿನಲ್ಲಿ ಸೋಲಾದಾಗ, ಸ್ವಾಭಿಮಾನಕ್ಕೆ ಧಕ್ಕೆಯುಂಟಾದಾಗ, ನಿಂದನೆಗಳು ಎದುರಾದಾಗ ನಿರಾಸೆ, ಹತಾಷೆ, ಜಿಗುಪ್ಸೆ ಉಂಟಾಗುವುದು ಸಹಜ. ಅಂತಹ ಸಂದರ್ಭಗಳಲ್ಲಿ ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳದಿದ್ದರೆ ಗುರಿ ತಲುಪಬೇಕಾದ ಬದುಕಿನ ಬಂಡಿ ಅರ್ಧಕ್ಕೆ ನಿಂತು ಬಿಡುತ್ತದೆ. ಮರಣಕ್ಕೆ ಶರಣಾಗಬೇಕಾಗುತ್ತದೆ. ಇಂತಹ ಕ್ಲೀಷ್ಟ ಪರಿಸ್ಥಿತಿಗಳಲ್ಲಿ ಹೊಂದಾಣಿಕೆಯೂ ನಮ್ಮನ್ನು ಹೊಸ ಬದುಕು ಕಟ್ಟಿಕೊಳ್ಳಲಿಕ್ಕೆ, ಚೈತನ್ಯ ತುಂಬಿಕೊಳ್ಳಲಿಕ್ಕೆ, ಜೀವನೋತ್ಸಾಹ ಪುಟುದೇಳಲಿಕ್ಕೆ ಸಹಾಯ ಮಾಡುತ್ತದೆ.
ಮಂದಿರ, ಮಸೀದಿ, ಚರ್ಚ್‌ಗಳಿಗೆ ಬೀಗ ಜಡಿದು ಮಹಾ, ಮಹಾ ಜ್ಯೋತಿಷಿಗಳನ್ನು ದೇವಮಾನವರನ್ನು ಮೂಲೆ ಹಿಡಿದು ಕೂಡಿಸಿದ, ಜಗತ್ತಿನ ಧನಿಕರನ್ನೆಲ್ಲ ದೈನೇಸಿಗಳನ್ನಾಗಿ ಮಾಡಿದ, ಮದುವೆ, ಅಂತ್ಯಕ್ರಿಯೆ, ಸಭೆ-ಸಮಾರಂಭಕ್ಕೂ ಕಡಿವಾಣ ಹಾಕಿದ ನಮ್ಮ ಮನೆ ಬಾಗಿಲಿಗೆ ಬಂದು ವಕ್ಕರಿಸಿದ ಕೊರೊನಾ ಎಂಬ ಮಹಾ ಮಾರಿ ಕಲಿಸಿದ ಪಾಠವೇ ಹೊಂದಾಣಿಕೆ. ಕಾಲದ ಕರೆಗೆ ಓಗೊಟ್ಟು, ಹೊಂದಿಕೊಂಡು ಸುಮ್ಮನೆ ಮನೆಯಲ್ಲಿ ಕುಳಿತಿರು. ಇಲ್ಲದಿದ್ದರೆ ಸ್ಮಶಾನ ಸೇರು ಎಂಬ ಸಂದೇಶ ಸಾರಿದೆ.
ಇದುವರೆಗೆ ಸಮಯ ನೋಡಿಕೊಳ್ಳುವುದಕ್ಕೂ ಸಮಯವಿಲ್ಲದಂತೆ ಹಣ, ಅಧಿಕಾರ, ಆಸ್ತಿ. ಅಂತಸ್ತುಗಳ ಹಿಂದೆ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡುತ್ತಿದ್ದ ನಮಗೆಲ್ಲ ಬಂಧಿಸಿಟ್ಟ ಕೊರೊನಾ ಎಂಬ ಕಣ್ಣಿಗೆ ಕಾಣದ ಯಕಸ್ಚಿತ್ ಒಂದು ಸಣ್ಣ ಕ್ರಿಮಿ. ಸೃಷ್ಟಿಯಲ್ಲಿ ಅಹಂಕಾರದಿಂದ ಬೀಗುತ್ತಿದ್ದ ಮನುಷ್ಯನೊಬ್ಬನೇ ಶ್ರೇಷ್ಠ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಬದುಕಲಿಕ್ಕೆ ಪಿಜ್ಜಾ, ಬರ್ಗರ್, ಪಾನಿಪೂರಿ, ಬೇಕಾಗಿಲ್ಲ. ರೊಟ್ಟಿ, ಚಟ್ನಿ ಇಷ್ಟಿದ್ದರೆ ಸಾಕು ಎಂಬ ಸತ್ಯ ಬಿಚ್ಚಿಟ್ಟಿದೆ. ದೇಹವೇ ದೇವಾಲಯ. ಮನೆಯೇ ಮಂದಿರವೆಂದು ನುಡಿದು ಅದರಂತೆ ನಡೆದು ತೋರಿದ ಶರಣರ ಸರಳ ಬದುಕೇ ಸಮೃದ್ಧ, ಸಂತೋಷ ಮತ್ತು ಸಾಥ್ಕ ಬದುಕು ಎಂಬುದನ್ನು ಮನಗಾಣಿಸಿದೆ.
ಬದಲಾದ ಪರಿಸ್ಥಿತಿಗೆ ತಕ್ಕಂತೆ ನಾವು ಹೊಂದಾಣಿಕೆ ಮಾಡಿಕೊಂಡು ಹೋಗದಿದ್ದರೆ ನಮ್ಮ ಬದುಕು ಮೂರಾಬಟ್ಟೆಯಾಗುತ್ತದೆ. ಇದಕ್ಕೆ ಜಗತ್ತಿನ ಹಲವಾರು ದೇಶಗಳ ಲಕ್ಷಾಂತರ ಜನರು ಬೆಲೆ ತೆರುತ್ತಿದ್ದಾರೆ. ಸಾವಿನ ಜೊತೆ ಸೆಣಸಾಡುತ್ತಿದ್ದಾರೆ ಈಗ. ಮೃತ್ಯುಕೂಪದಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಹೊಂದಾಣಿಕೆ ಎಂಬುದು ಈಗಷ್ಟೇ ಅಲ್ಲ. ಬದುಕಿನ ಎಲ್ಲ ಕಾಲದಲ್ಲಿಯೂ, ಎಲ್ಲರೂ ಎಲ್ಲ ಸಂದರ್ಭಗಳಲ್ಲಿಯೂ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪಾಠ. ಸದ್ಯಕ್ಕಂತೂ ಲೋಕಾಂತ ಬಿಟ್ಟು ಏಕಾಂತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.