ಎತ್ತಿಗೆ ಜ್ವರ ಎಮ್ಮೆಗೆ ಬರೆ ಕೊವಿಡ-19

0
92
ಎತ್ತಿಗೆ ಜ್ವರ ಎಮ್ಮೆಗೆ ಬರೆ ಕೊವಿಡ-19
ಬಂದಿದೆ ಮಹಾಮಾರಿ ಆಚೆ ಸೀಮೆಯ ನೆರೆಯೂರಿನಿಂದ
ಕೆಮ್ಮುತ್ತ ಉಸಿರುಗಟ್ಟಿಸುತ್ತ
ಮೈ ಬೆಚ್ಚಗೆ ಮಾಡಿ ಉಗುಳು ಸಿಂಪಡಿಸುತ್ತ
ವೈರಾಣುಗಳಿಗೆ ಆಹಾರ ಒದಗಿಸುತ್ತ
ಕ್ರೌರ್ಯದ ಹಾಡಿಗೆ ಧ್ವನಿಗೂಡಿಸುತ್ತ
ಭೇದವೆಣಿಸದೆ ಎಲ್ಲರನ್ನು ಬಿಗಿದಪ್ಪಿಕೊಳ್ಳುತ್ತ
ಬಂದಿದೆ ಮಹಾಮಾರಿ ನೆರೆಯೂರಿನಿಂದ
ಧರ್ಮದ ತಟ್ಟೆಯಲ್ಲಿ ಕೋಮು ವೈರಾಣುಗಳಿಟ್ಟು
ಸ್ವಾಗತಿಸಿದರು
ತಮಟೆ ಬಾರಿಸಿ ದೀಪ ಹಚ್ಚಿ ಚಪ್ಪಾಳೆ ತಟ್ಟಿ
ಮದ್ದಲ್ಲ ಮುದ್ದು ಕೊಟ್ಟು
ಕುಂತ ಟೊಂಗೆಯನ್ನೆ ಕತ್ತರಿಸುವ ಮಂಗಗಳಂತೆ
ಬೊಗಳಿ ಮಸಾಲಿ ಕುಟ್ಟುತ್ತಿವೆ ಮೂರ್ಖರ ಪೆಟ್ಟಗೆಗಳು
ಸುಳ್ಳಿಗೆ ಸುಳ್ಳು ಪೋಣಿಸುತ್ತ ಸತ್ಯದ ಕುತ್ತಿಗೆ ಕತ್ತರಿಸುತ್ತ
ಮಾಡಿ ಮುಗಿಸಿದ್ದಾಯಿತು
ಹೋಮ ಹವನ ಯಜ್ಞೆ ಯಾಗಾದಿಗಳು
ತಿಂದು ಕುಡಿದದ್ದಾಯಿತು
ಗೋಬರ ಗೋಮೂತ್ರ
ಕೂಗಿದ್ದಾಯಿತು ಗೋ ಬ್ಯಾಕ್
ಲಾಕ್ ಡೌನ್
ಜಾತ್ರೆ ಸಂತೆ ಮದುವೆ ಮುಂಜೆಗಳು ಶೀಲ ಡೌನ್
ಬಾಗಿಲು ಮುಚ್ಚಿವೆ ದೇವ ಮಂದಿರಗಳು
ಮೂಲೆಗುಂಪಾಗಿವೆ ಪಂಚಾಂಗ ಪೋತಿಗಳು
ಬೀಗುತ್ತಿವೆ ಮುಖವಾಡಗಳು
ಹಸಿದ ಹೊಟ್ಟೆಗಳಿಗೆ ಸಾಂತ್ವನ ಗುಳಿಗೆ ಕೊಟ್ಟು
ಧರ್ಮದ ಬಂದೂಕಿಗೆ ದ್ವೇಷದ ಬುಲೇಟ್ ತುಂಬುತ್ತ
ಮನೆ ಮನಗಳನ್ನು ಮಸಣ ಮಾಡುತ್ತ
ಕುಂತಿದ್ದಾನೆ ಮಾಲಿಕ ಕುಲಪಿ ಚೀಪುತ್ತ
ಸರದಿಯಲ್ಲಿ ನಿಂತಿದ್ದಾರೆ
ಗಾಡಿ ಹೋದ ಮೇಲೆ ಟೀಕಿಟು ಖರೀದಿಸಲು
ಬಂದು ನಿಂತಿದೆ ಪಯಣ
ಕೈ ಮುಗಿದು ಭಿಕ್ಷೆ ಬೇಡುವಲ್ಲಿಗೆ
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ
ಅಜ್ಞಾನಕ್ಕೆ ವಿಜ್ಞಾನವೊಂದೆ ಪರಿಹಾರ.

ಡಾ. ಪ್ರಭು ಖಾನಾಪುರೆ, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here