ನವದೆಹೆಲಿ: ಕೊರೋನಾ ಸೋಂಕನ್ನು ಹೋಗಲಾಡಿಸಲು ಬಳಸಲು ಮುಂಧಾಗಿರುವ ಪ್ಲಾಸ್ಮಾ ಥೆರಪಿ ಇನ್ನೂ ಪರೀಕ್ಷೆಯ ಹಂತದಲ್ಲಿ ಇದ್ದು, ಈ ಚಿಕಿತ್ಸೆಯು ಸೋಂಕು ಗುಣಪಡಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ.
ದೆಹಲಿಯಲ್ಲಿ ನಡೆದ ಮೊದಲ ಪ್ಲಾಸ್ಮಾ ಥೆರಪಿ ಯಶಸ್ವಿ ಪರೀಕ್ಷೆ ನಂತರ ಮೂಡಿದ್ದ ಭರವಸೆ ಬಗ್ಗೆ ಸರ್ಕಾರ ಈ ಸ್ಪಷ್ಟನೆ ನೀಡಿದ್ದು, ಕೊರೋನಾ ವೈರಸ್ ನ್ನು ನಾಶಪಡಿಸಲು ಸಿದ್ದಪಡಿಸುತ್ತಿರುವ ಈ ಥೆರಪಿ ಇನ್ನೂ ಪ್ರಯೋಗ ಹಂತದಲ್ಲಿ ಇದ್ದು, ಇದು ರೋಗಿಗೆ ಮಾರಕವಾಗಬಹುದು ಎಂಬುದನ್ನು ಸಹ ಖಚಿತಪಡಿಸಿಕೊಳ್ಳುಲು ಸಾಧ್ಯವಾಗಿಲ್ಲ ಎಂದು ಸಚಿವಾಲಯ ತನ್ನ ದಿನಪ್ರತಿ ವಿವರಣೆಯಲ್ಲಿ ತಿಳಿಸಿದೆ.
ಇದೇ ವೇಳೆ, ಈ ಥೆರಪಿ ಕೊರೋನಾ ವೈರಸ್ ನ್ನು ನಾಶಪಡಿಸುವ ಚಿಕಿತ್ಸೆಗೆ ಸಹಕರಿಸುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ಸಾಕ್ಷಿಗಳಿಲ್ಲ ಹಾಗೂ ಥೆರಪಿ ಪರೀಕ್ಷಾ ಹಂತದಲ್ಲಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಇದರ ಬಗ್ಗೆ ರಾಷ್ಟ್ರೀಯ ಸಂಶೋಧನೆಯನ್ನೂ ಕೈಗೊಂಡಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ತಿಳಿಸಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ 49 ವರ್ಷದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಯೋಗವಾಗಿ ಈ ಥೆರಪಿಯನ್ನು ನಡೆಸಲಾಗಿತ್ತು, ಅದರಿಂದ ಆ ವ್ಯಕ್ತಿ ಗುಣಮುಖರಾಗಿದ್ದ ವಿಷಯ ಪ್ಲಾಸ್ಮಾ ಥೆರಪಿ ಮೇಲೆ ವಿಶ್ವಾಸ ಮತ್ತು ಭರವಸೆ ಮೂಡಿಸಿತ್ತು. ಆದರೆ ಇಂದು ಆರೋಗ್ಯ ಸಚಿವಾಲಯ ಈ ಬಗ್ಗೆ ಹಲವು ವಿಷಯಗಳನ್ನು ತಿಳಿಸಿದ್ದು, ಯಾವುದೇ ರಾಜ್ಯ ಸರ್ಕಾರ ICMR ಥೆರಪಿ ಬಗ್ಗೆ ಕೈಗೊಂಡಿರುವ ಅಧ್ಯಯನ ಮುಗಿಯುವರೆಗೂ ಇದನ್ನು ಕೇವಲ ಪರೀಕ್ಷೆ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಹಾಗೂ ಸರಿಯಾದ ಮಾರ್ಗ ಸೂಚಿಗಳು ಇಲ್ಲದೆ ಥೆರಪಿಯನ್ನು ಕೈಗೊಳ್ಳಬಾರದು ಎಂದು ಸ್ಪಷ್ಟ ಸಂದೇಶವನ್ನು ನೀಡಿದೆ.
ಏನಿದು ಪ್ಲಾಸ್ಮಾ ಥೆರಪಿ: ಈಗಾಗಲೆ ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ದೇಹದಲ್ಲಿ ಆ ವೈರಾಣು ವಿರುದ್ದ ಹೋರಾಡಿದ್ದ ರೋಗ ನಿರೋಧಕ ಕಣಗಳನ್ನು ಸಂಗ್ರಹಿಸಿ ಇದೇ ಸೋಂಕಿಗೆ ಒಳಗಾಗಿರುವ ಇನ್ನೊಬ್ಬ ವ್ಯಕ್ತಿಯ ದೇಹದ ಸೇರಿಸಿ ಚಿಕಿತ್ಸೆ ನೀಡುವುದನ್ನು ಪ್ಲಾಸ್ಮಾ ಥೆರಪಿ ಎಂದು ಕರೆಯಲಾಗುತ್ತದೆ.
ಗುಣಮುಖವಾದ ವ್ಯಕ್ತಿಯಿಂದ ಸಂಗ್ರಹಿಸಲಾಗಿದ್ದ ರಕ್ತದ ಕಣಗಳು ಇನ್ನೊಬ್ಬ ಸೋಂಕಿತ ವ್ಯಕ್ತಿಯ ರಕ್ತದ ಜೊತೆ ಸೇರಿದಾಗ ಆ ರಕ್ತಗಳು ತಮ್ಮ ಹೋರಾಟವನ್ನು ಮುಂದುವರಿಸುತ್ತವೆ. ಸೇರಿಸಲಾದ ರಕ್ತಕಣಗಳು ಕೊರೋನಾ ವೈರಸ್ ಕಣಗಳೊಂದಿಗೆ ಪ್ರತಿರೋಧ ತೋರಿ ಅವುಗಳನ್ನು ನಾಶಪಡಿಸಿದರೆ ವ್ಯಕ್ತಿ ಸೋಂಕಿನಿಂದ ಗುಣ ಆಗಬಹುದು ಎಂಬುದು ಪ್ಲಾಸ್ಮಾ ಥೆರಪಿಯ ಉದ್ದೇಶ.
ದೆಹಲಿಯ ನಂತರ ಕರ್ನಾಟಕ ಸರ್ಕಾರಕ್ಕೆ ಪ್ಲಾಸ್ಮಾ ಥೆರಪಿಯನ್ನು ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳು ರಕ್ತ ನೀಡಲು ಮುಂದಾಗಿರಲಿಲ್ಲ ಆದರೆ, ಸರ್ಕಾರ ಮತ್ತು ವೈದ್ಯರ ಮನವಿ ನಂತರ ಕೆಲವು ಗುಣಮುಖವಾಗಿದ್ದ ವ್ಯಕ್ತಿಗಳು ರಕ್ತದಾನ ಮಾಡಿದ್ದರು.
ನಂತರ ಈ ಬಗ್ಗೆ ಪರೀಕ್ಷೆ ಕೈಗೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಮುಂದಾಗಿ, ಶನಿವಾರ ದಾನಿಗಳಿಂದ ರಕ್ತ ತೆಗೆದುಕೊಂಡು ಸೋಮವಾರದಿಂದ ರೋಗಿಯೊಬ್ಬರಿಗೆ ಪ್ರಾಯೋಗಿಕವಾಗಿ ಪರೀಕ್ಷೆ ಕೈಗೊಳ್ಳಲು ಮುಂದಾಗಲಿದೆ ಎಂದು ಮಾಹಿತಿ ನೀಡಿತ್ತು ಆದರೆ ಇದುವರೆಗೂ ಸರ್ಕಾರ ಪ್ರಯೋಗವನ್ನು ಕೈಗೊಳ್ಳಲು ಮುಂದಾಗಿಲ್ಲ. ಇದರ ನಡುವೆ ಕೇಂದ್ರ ಆರೋಗ್ಯ ಇಲಾಖೆ ಇಂದು ಸೂಚಿಸಿರುವ ನಿಯಮಗಳು ಸರ್ಕಾರವನ್ನು ಈ ಪರೀಕ್ಷೆ ನಡೆಸಲು ಇನ್ನಷ್ಟು ಸುರಕ್ಷತಾ ಕ್ರಮಗಳ ಬಗ್ಗೆ ಚಿಂತಿಸುವತ್ತ ಮಾಡಿದೆ.