ಕಲಬುರಗಿ: ಕೊರೋನಾ ಸೋಂಕಿಗೆ ತುತ್ತಾಗಿದ್ದ ಕಲಬುರಗಿ ತಾಲೂಕಿನ ಕವಲಗಾ ಗ್ರಾಮದ ಒಂದು ವರ್ಷದ ಗಂಡು ಮಗು ಸೇರಿದಂತೆ 4 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಗುರುವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.
ಇನ್ಫ್ಲ್ಯೂಎಂಜಾ ಲೈಕ್ ಇಲ್‌ನೆಸ್ ಹಿನ್ನೆಲೆಯಿಂದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪಿಲ್ಕಂ ಪ್ರದೇಶದ ಎರಡು ವರ್ಷದ ಗಂಡು ಮಗು (ರೋಗಿ ಸಂಖ್ಯೆ-227) ಏಪ್ರಿಲ್ 12 ರಂದು ಮತ್ತು ಕಲಬುರಗಿ ತಾಲೂಕಿನ ಕವಲಗಾ ಗ್ರಾಮದ ಒಂದು ವರ್ಷದ ಗಂಡು ಮಗು (ರೋಗಿ ಸಂಖ್ಯೆ-274) ಏಪ್ರಿಲ್ 15 ರಂದು ಕೊರೋನಾ ಸೋಂಕು ದೃಢವಾದರಿಂದ ಸೂಪರ್ ವಿಷನ್ ಐಸೋಲೇಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿತ್ತು.
ಅದೇ ರೀತಿ ಕಲಬುರಗಿ ನಗರದ ಸಂತ್ರಾಸಸವಾಡಿ ಪ್ರದೇಶದ ಮೃತ ರೋಗಿ ಸಂಖ್ಯೆ-177ರ ಸಂಪರ್ಕದಲ್ಲಿ ಬಂದ ಅವರ ಸೊಸೆ 24 ವರ್ಷದ ಯುವತಿ(ರೋಗಿ ಸಂಖ್ಯೆ-220) ಮತ್ತು ಇದೇ ಮೃತ ರೋಗಿಯ ನೇರ ಸಂಪರ್ಕದಲ್ಲಿ ಬಂದ ಬಹಮನಿ ಆಸ್ಪತ್ರೆಯಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದ ಆದರ್ಶ ನಗರದ 38 ವರ್ಷದ ಯುವತಿ (ರೋಗಿ ಸಂಖ್ಯೆ-222) ಕೊರೋನಾ ಸೋಂಕು ಪೀಡಿತರಾಗಿ ಚಿಕಿತ್ಸೆಗೆ ಒಳಗಾಗಿದ್ದರು.
ಈ ನಾಲ್ಕು ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.
ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ ಪತ್ತೆಯಾದ 53 ಜನರಲ್ಲಿ ಒಟ್ಟು 12 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 5 ಜನ ನಿಧನ ಹೊಂದಿದ್ದು, 36 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.