ಕರೋನಾ ಕಾರಣದಿಂದಾಗಿ ಒಂದೂವರೆ ತಿಂಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ಮದ್ಯ ಮಾರಾಟವನ್ನು ಪುನರಾರಂಭಿಸಲು ಸರ್ಕಾರ, ರಾಜ್ಯದ ಬಹುತೇಕ ಸ್ಥಳಗಳಲ್ಲಿ ಕರೋನ ಇನ್ನೂ ಗಂಭೀರ ಸ್ವರೂಪದಲ್ಲಿರುವಾಗಲೇ, ಅನುಮತಿ ಕೊಟ್ಟು ಆದೇಶ ಹೊರಡಿಸಿರೋದು ವಿಷಾದನೀಯ ಹಾಗೂ ಆತಂಕಕಾರಿ.
ಈ ಆದೇಶದ ಪರಿಣಾಮವಾಗಿ ಮದ್ಯವನ್ನು ಅಂಗಡಿಯಿಂದ ತಂದು ಮನೆಯಲ್ಲಿ ಕುಡಿಯುವುದರಿಂದ ಕೌಟುಂಬಿಕ ಶಾಂತಿ ,ನೆಮ್ಮದಿಯ ಮೇಲೆಅತ್ಯಂತ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ. ಕುಟುಂಬದ ಸದಸ್ಯರ ಕಣ್ಣಿಗೆ ಕಾಣದ ದೂರದ ಸ್ಥಳದಲ್ಲಿ ಕುಡಿದು ಬರುತ್ತಿದ್ದವರು ಈಗ ಮದ್ಯವನ್ನು ಮನೆಗೇ ತಂದು ಮನೆಯಲ್ಲಿ ಎಲ್ಲರ ಗಮನಕ್ಕೆ ಬರುವಂತೆ ಚಹ, ಕಾಫಿ, ಮಜ್ಜಿಗೆ ಕುಡಿದಷ್ಟೇ ಸರಳವಾಗಿ, ನಿಸ್ಸಂಕೋಚವಾಗಿ ಕುಡಿಯುವಂತೆ ಆಗುವುದರಿಂದ ಎಳೆ ವಯಸ್ಸಿನ, ಮುಗ್ಧ ಮನಸ್ಸಿನ, ನಮ್ಮ ದೇಶದ ಆದರ್ಶ, ಅನುಕರಣೀಯ ಸತ್ಪ್ರಜೆಗಳಾಗಬೆಕಾದ ಮಕ್ಕಳಮೇಲೆ ಅದೆಷ್ಟು ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬ ಕಟು ಸತ್ಯ ಅತ್ಯಂತ ಸಾಮಾನ್ಯ ವ್ಯಕ್ತಿಗೆ ಅರ್ಥವಾಗುತ್ತದೆಯಾದರೂ ರಾಜ್ಯದ ಆಡಳಿತದ ಹೊಣೆ ಹೊತ್ತ ಪ್ರಜ್ಞಾವಂತರಿಗೆ ಅದು ಹೇಗೆ ಅರ್ಥವಾಗಿಲ್ಲ ಎಂಬುದು ತಿಳಿಯದಾಗಿದೆ.
ಕುಡುಕರಿಗೆ ಇಂಥ ಅವಕಾಶವನ್ನು ಒದಗಿಸಿ ಕೊಡುವುದರಿಂದ “ಮದ್ಯಪಾನ ಒಂದು ಉತ್ತಮ ಅಭ್ಯಾಸ, ಅದನ್ನು ನಾವೂ ಮಾಡಬೇಕು” ಎಂಬ ಸಂದೇಶವನ್ನು ನಮ್ಮ ಮುಂದಿನ ಪೀಳಿಗೆಯವರಿಗೆ ರವಾನಿಸಿದಂತೆ ಆಗುತ್ತದೆ. ಇದೂ ಅಲ್ಲದೇ ಸುಮಾರು ಒಂದೂವರೆ ತಿಂಗಳಿಂದ ಮದ್ಯ ದೊರೆಯದ್ದರಿಂದಾಗಿ ಅನಿವಾರ್ಯವಾಗಿ ಮದ್ಯ ವ್ಯಸನಿಗಳು ಅದರಿಂದ ದೂರವಾಗುವತ್ತ ನಿರ್ಧಾರ ಮಾಡಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದುವರಿಯುತ್ತಿರುವ ಇಂಥ ಸುಸಂದರ್ಭದಲ್ಲಿ ಕೇವಲ ಆರ್ಥಿಕ ಲಾಭದ ದೃಷ್ಟಿಯಿಂದ ಅಂಥವರು “ಮತ್ತೆ ಮದ್ಯ ವ್ಯಸನಿಗಳಾಗುವುದಕ್ಕೆ” ಆಸ್ಪದ ಮಾಡಿಕೊಡುವುದು ಅದೆಷ್ಟರ ಮಟ್ಟಿಗೆ “ನೈತಿಕವಾಗಿ ಸರಿ” ಎಂಬುದನ್ನು “ರಾಜ್ಯಾಡಳಿತದ ಚುಕ್ಕಾಣಿ” ಹಿಡಿದಿರುವ ಮುಖ್ಯಸ್ಥರು ಆತ್ಮಾವಲೋಕನ ಮಾಡಿಕೊಂಡು ಪ್ರಸ್ತುತ ಆದೇಶವನ್ನು ಹಿಂತೆಗೆದುಕೊಂಡು ನಮ್ಮ ರಾಜ್ಯವನ್ನು “ಪಾನ ಮುಕ್ತ ರಾಜ್ಯವನ್ನಾಗಿಸುವತ್ತ ದೃಢ ಹೆಜ್ಜೆಯನ್ನಿರಿಸ” ಬೇಕೆಂದು ನನ್ನ ಕಳಕಳಿಯ ನಮ್ರವಿನಂತಿ.
ಪಾನ ನಿಷೇಧದಿಂದ ಸರ್ಕಾರಕ್ಕಾಗುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಸಂಪನ್ಮೂಲ ಸಂಗ್ರಹಣೆಯ ಪರ್ಯಾಯ ಮೂಲಗಳನ್ನು ಶೋಧಿಸೋದು ಅಸಾಧ್ಯವೇನಲ್ಲ. ರಾಷ್ಟ್ರಾದ್ಯಂತ ವ್ಯಾಪಿಸಿರುವ ಕರಗಳ್ಳತನ, ಭ್ರಷ್ಟಾಚಾರ, ಸರ್ಕಾರಗಳ ದುಂದುವೆಚ್ಚ ಇವುಗಳನ್ನುನಿಯಂತ್ರಿಸುವುದು ಅಂಥ ಪರ್ಯಾಯಗಳಲ್ಲಿ ಕೆಲವು ಅನ್ನೋದನ್ನು ಬಹುಶ: ಯಾರೂ ಅಲ್ಲಗಳೆಯಲಾರರು
ದಿ.03/05/2020 ಭಾನುವಾರದ ‘ಕನ್ನಡಪ್ರಭ’ ದಿನಪತ್ರಿಕೆಯಲ್ಲಿ ( ಪು 5) “ಮದ್ಯ ಮಾರಾಟ ಮರು ಆರಂಭ : ಮಠಾಧಿಪತಿಗಳ ತೀವ್ರ ವಿರೋದ” ಎಂಬ ಶೀರ್ಷಿಕೆಯಡಿ ನಮ್ಮ ಸರ್ಕಾರದ ಪ್ರಸ್ತುತ ಆದೇಶವನ್ನು ಪೂಜ್ಯರಾದ ಕೂಡಲಸಂಗಮ ಶ್ರೀಗಳು, ಸಾಣೇಹಳ್ಳಿ ಶ್ರೀಗಳು ಹಾಗೂ ಗದುಗಿನ ತೋಂಟದ ಶ್ರೀಗಳು ತೀವ್ರವಾಗಿ ವಿರೋಧಿಸಿದ್ದಾಗಿ ಮತ್ತು ಕೂಡಲಸಂಗಮ ಶ್ರೀಗಳು ಪ್ರಧಾನ ಮಂತ್ರಿಗಳಿಗೆ ಹಾಗೂ ಮುಖ್ಯ ಮಂತ್ರಿಗಳಿಗೆ ಈ ವಿಷಯವಾಗಿ ಪತ್ರ ಬರೆದದ್ದಾಗಿ ವರದಿಯಾದದ್ದನ್ನು ಓದಿ ಸಂತೋಷವಾಯಿತು.
ಈ ಎಲ್ಲ ಪೂಜ್ಯರಲ್ಲಿ ನಾನು ವಿನಮ್ರತೆಯಿಂದ ವಿನಂತಿಸಿಕೊಳ್ಳುವುದೆಂದರೆ, ಸರ್ಕಾರದ ನೀತಿಯನ್ನು ವಿರೋಧಿಸಿ ಪತ್ರ ಬರೆಯುವುದು, ಹೇಳಿಕೆ ನೀಡುವುದರ ಜತೆಗೆ ಸರ್ಕಾರಗಳಿಗೆ ಸೂಕ್ತ ಎಚ್ಚರಿಕೆ ಕೊಟ್ಟು ಕಠಿಣ ಹೋರಾಟವನ್ನೇ ಹಮ್ಮಿಕೊಳ್ಳಬೇಕಾಗುತ್ತದೆಂಬುದು ನನ್ನ ಅಭಿಪ್ರಾಯ. ಈ ದಿಶೆಯಲ್ಲಿ ನಾಡಿನ ಜನತೆಯಲ್ಲಿ ಜಾಗೃತಿ ಮೂಡಿಸುವಲ್ಲಿ ತಮ್ಮ ಮಾರ್ಗದರ್ಶನದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಿಗಿದೆ .ಈ ಸಂಬಂಧ ನನ್ನ ಸೇವೆ, ಸಹಕಾರ ಇರುತ್ತದೆ ಎಂಬುದು ನನ್ನ ನಿವೇದನೆ.