ಸುರಪುರ: ಲಾಕ್‍ಡೌನ್ ಘೋಷಣೆಯಿಂದ ಕಳೆದೆರಡು ತಿಂಗಳಿಂದ ಮನೆಯಲ್ಲಿದ್ದ ಜನರಿಗೆ ಈಗ ಲಾಕ್‍ಡೌನ್ ಸಡಿಲಿಕೆಯಿಂದಾಗಿ ಎಲ್ಲರು ರೋಡಿಗಿಳಿದರು.ಸುರಪುರ ನಗರದ ಎಲ್ಲಾ ಮುಖ್ಯ ರಸ್ತೆಗಳ ತುಂಬಾ ಜನ ಜಂಗುಳಿ ಕಂಡಬಂತು.ಒಂದೆಡೆ ಬೈಕ್‍ಗಳ ಅರ್ಭಟ ಮತ್ತೊಂದೆಡೆ ತಂಡ ತಂಡವಾಗಿ ಓಡಾಡುತ್ತಿದ್ದ ಜನರಿಂದ ಜಾತ್ರೆಯಂತೆ ಭಾಸವಾಯ್ತು.
ನಗರದಲ್ಲಿನ ಬಟ್ಟೆ ಅಂಗಡಿಗಳು,ಬಾಂಡೆ ಸಾಮಾನುಗಳ ಅಂಗಡಿಗಳು,ಬಂಗಾರ ಆಭರಣದ ಅಂಗಡಿಗಳು ಜನರಿಂದ ತುಂಬಿ ಹೋಗಿದ್ದವು.ಬಟ್ಟೆ ಅಂಗಡಿಗಳಲ್ಲಂತೂ ಒಬ್ಬರ ಮೇಲೊಬ್ಬರು ಬಿದ್ದು ಬಟ್ಟೆ ಖರೀದಿಗೆ ಮುಗಿಬಿದ್ದರು.ಒಂದೆಡೆ ಮದುವೆ ದಿನಗಳು ಹಾಗು ಮುಸ್ಲೀಂ ಬಾಂಧವರ ರಂಜಾನ್ ಹಬ್ಬವು ಇದೇ ಸಂದರ್ಭದಲ್ಲಿರುವುದರಿಂದ ಎಲ್ಲರು ಬಟ್ಟೆ ಖರೀದಿಯಲ್ಲಿ ತೊಡಗಿದ್ದರು.
ಲಾಕ್‍ಡೌನ್‍ನಿಂದ ಈ ಹಿಂದೆ ಖರೀದಿಸಿ ತಂದ ಬಟ್ಟೆಗಳೆ ಇವೆ.ಈಗ ಮತ್ತೆ ಖರೀದಿಸಿ ತರಲು ಮುಂಬೈ ಮತ್ತಿತರೆಡೆಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಮತ್ತೆ ಬಟ್ಟೆ ತರಲು ಸಾಧ್ಯವಾಗದು.ಇದು ಅರಿತುಕೊಂಡು ಜನರು ಬಟ್ಟೆ ಖರೀದಿಗೆ ಮುಗಿಬಿದ್ದಿದ್ದಾರೆ.ಇದರಿಂದ ಇದುವರೆಗೆ ಅಂಗಡಿಯಲ್ಲಿದ್ದ ಎಲ್ಲಾ ಬಟ್ಟೆಗಳು ಖಾಲಿಯಾಗುತ್ತಿವೆ.ಇನ್ನು ಕೆಲ ದಿನಗಳಲ್ಲಿ ಜನರಿಗೆ ಬೇಕಾದ ಬಟ್ಟೆ ಸಿಗುವುದು ಸಾಧ್ಯವಿಲ್ಲ ಎನ್ನುತ್ತಾರೆ ಬಟ್ಟೆ ಅಂಗಡಿ ಮಾಲೀಕ ಅಬ್ದುಲ್ ಮಜೀದ್. ಸಾವಿರಾರು ಸಂಖ್ಯೆಯಲ್ಲಿ ಜನ ಜಂಗುಳಿ ಸೇರಿದ್ದರಿಂದ ಜನರ ಮದ್ಯೆ ಸಾಮಾಜಿಕ ಅಂತರ ಎಂಬುದಕ್ಕೆ ಅರ್ಥವಿಲ್ಲದಂತಾಗಿತ್ತು.ಅಲ್ಲದೆ ಪ್ರತಿ ನಾಲ್ವರಲ್ಲಿ ಇಬ್ಬರು ಯಾವುದೇ ಮಾಸ್ಕ್ ಧರಿಸದೆ ಕೊರೊನಾ ಆಹ್ವಾನಿಸುತ್ತಿರುವಂತಿತ್ತು.
ಕೆಲ ಬಟ್ಟೆ ಅಂಗಡಿಗಳಲ್ಲಿ ಒಳಗೆ ಬರುವವರಿಗೆ ಸ್ಯಾನಿಟೈಜರ್ ಹಾಕಿ ಕೈ ಶುಚಿಗೊಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದು ಬಿಟ್ಟರೆ ಇನ್ನುಳಿದೆಡೆ ಕೊರೊನಾ ಭೀತಿಯಾಗಲಿ ಕೋವಿಡ್-19 ನಿಯಮಗಳಾಗಲಿ ಗಾಳಿಗೆ ತೂರಿದ್ದು ಕಂಡುಬಂತು.ಇದರಿಂದ ಸೇರಿದ ಜನರಲ್ಲಿ ಒಬ್ಬರಿಗೆ ಕೊರೊನಾ ಸೊಂಕು ಇದ್ದರೆ ಎಲ್ಲರ ಗತಿ ಏನಾಗಲಿದೆ ಎಂದು ಅನೇಕರು ಗಾಬರಿಗೊಂಡರು.ಪೊಲೀಸ್ ಸಿಬ್ಬಂದಿಯವರು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸುತ್ತಿದ್ದರು.