ನಾಗಮಂಗಲ : ಮಾನವನ ಆಸೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತ ದುರಾಸೆಗಳಾಗಿ ಪರಿಣಮಿಸುತ್ತಿದೆ. ಆ ಮೂಲಕ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಮನಷ್ಯ ತಲುಪಿದ್ದಾನೆ. ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚು ಹೆಚ್ಚು ಹಸಿರು ಬೆಳೆಸಿದರೆ ಉಸಿರು ಉಳಿಯುತ್ತದೆ ಈ ನಿಟ್ಟಿನಲ್ಲಿ ಪರಿಸರ ಸ್ನೇಹಿ ಜೀವನ ನಡೆಸುವಂತೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ತಹಸೀಲ್ದಾರ್ ಕುಂಞಿ ಅಹಮದ್ ಅಭಿಪ್ರಾಯಪಟ್ಟರು.
ಪಟ್ಟಣದ ಟಿ.ಬಿ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಟ್ಟು ಬಳಿಕ ಅವರು ಮಾತನಾಡಿದರು.
ಪ್ರಪಂಚದಲ್ಲಿ ಪ್ರಕೃತಿಯ ಮುಂದೆ ಯಾವುದು ದೊಡ್ಡದಲ್ಲ. ಪ್ರಕೃತಿಯ ನಾಶಕ್ಕಾಗಿ ಮಾನವ ನಿರಂತರವಾಗಿ ಶ್ರಮಿಸುತ್ತಿದ್ದು ಮುಂದಿನ ಅಪಾಯಗಳ ಬಗ್ಗೆ ಅರಿವಿಲ್ಲದೆ ಪ್ರಕೃತಿಯ ನಾಶದಂತಹ ದುಷ್ಕøತ್ಯ ನಡೆಸುತ್ತಿರುವುದು ವಿಷಾದದ ಸಂಗತಿಯಾಗಿದೆ. ಪ್ರಕೃತಿಯಿಂದ ಮಾನವನೇ ಹೊರತು ಮಾನವನಿಂದ ಪ್ರಕೃತಿಯಲ್ಲ ಎಂಬ ಸತ್ಯದ ಅರಿವಿದ್ದರೂ ಹುಂಬತನದಿಂದ ಮಾನವ ಜೀವಿಸುತ್ತಿದ್ದಾನೆ. ಪ್ರಕೃತಿಯಿಲ್ಲದೆ ಮಾನವ ಬದುಕಲು ಸಾಧ್ಯವಿಲ್ಲ, ಆದರೆ ಮಾನವನಿಲ್ಲದೆ ಪ್ರಕೃತಿ ಸುಂದರವಾಗಿರುತ್ತದೆ ಇದನ್ನು ನಾವೆಲ್ಲರೂ ಮೊದಲು ಅರಿಯಬೇಕು. ನಮ್ಮ ಉಳಿವಿಗಾಗಿ ನಾವು ಪ್ರಕೃತಿಯನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್ ಮಾತನಾಡಿ ಪ್ರಕೃತಿಯ ನಾಶಕ್ಕೆ ಮಾನವನ ದುರಾಸೆಗಳೆ ಕಾರಣವಾಗಿದೆ. ಆ ಆಸೆಗಳು ನಮ್ಮ ಉಳಿವಿಗಾಗಿ ನಮ್ಮ ಹಿತರಕ್ಷಣೆಗಾಗಿ ಪೂರಕವಾಗಿರಬೇಕೆ ಹೊರತು ಆದಾಯದ ದೃಷ್ಠಿಯಿಂದ ಕೂಡಿದವುಗಳಾಗಬಾರದು. ನಮ್ಮ ಇಂದಿನ ಅಲ್ಪಪ್ರಮಾಣದ ನೆಮ್ಮದಿಗಾಗಿ ಮುಂದಿನ ನೂರಾರು ವರ್ಷಗಳ ನೆಮ್ಮದಿಯನ್ನು ಹಾಳುಮಾಡುವುದು ಸರಿಯಲ್ಲ.
ಆದ್ದರಿಂದ ಪ್ರಕೃತಿಯ ಉಳಿವಿನ ವಿಚಾರದಲ್ಲಿ ಆದಾಯದ ದೃಷ್ಠಿಕೋನದಿಂದ ಹೊರಬಂದು ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಗಿಡ ಮರಗಳನ್ನು ಬೆಳೆಸುವ ಮೂಲಕ ಉತ್ತಮವಾದ ಪ್ರಕೃತಿಯನ್ನು ನಿರ್ಮಾಣ ಮಾಡಬೇಕಾಗಿದೆ. ನಾವು ನಮ್ಮ ಮುಂದಿನ ತಲೆಮಾರಿಗೆ ಕೋಟಿಗಟ್ಟಲೆ ಆಸ್ತಿ ಮಾಡಿದರೆ ಮಾತ್ರ ಸಾಲದು ಅದರ ಜೊತೆಗೆ ಉತ್ತಮ ಪರಿಸರ ನೀಡಬೇಕಿದೆ. ಆಸ್ತಿಯನ್ನು ಬಳುವಳಿಯಾಗಿ ನೀಡುವ ಬದಲಾಗಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿದರೆ ಮುಂದಿನ ತಲೆಮಾರಿಗೆ ಅದೇ ದೊಡ್ಡ ಆಸ್ತಿಯಾಗಲಿದೆ ಎಂದರು.
ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರಾಜೇಂದ್ರ ಮಾತನಾಡಿ, ಜನರು ಮಳೆಯಿಲ್ಲದೆ ಬರಗಾಲದಿಂದ ತತ್ತರಿಸುವಂತಹ ಸ್ಥಿತಿಯನ್ನು ದೇವರು ನಿರ್ಮಾಣ ಮಾಡಿಲ್ಲ. ಅಂತಹ ಸನ್ನಿವೇಶವನ್ನು ನಾವೇ ನಮ್ಮ ಕೈಯಿಂದ ನಿರ್ಮಾಣ ಮಾಡಿಕೊಂಡಿರುವ ಸಮಸ್ಯೆಯಾಗಿದೆ. ಮರಗಳನ್ನು ನಾಶ ಮಾಡುವುದರಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅರಿವಿದ್ದರು ದಿನನಿತ್ಯ ಮರಗಳ ನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಮೊದಲು ನಮ್ಮ ರಕ್ಷಣೆಗೋಸ್ಕರ ಆದರೂ ಪರಿಸರವನ್ನು ಉಳಿಸಿಕೊಳ್ಳಬೇಕಿದೆ ಎಂದರು. ಪರಿಸರ ಎಂಬುದಕ್ಕೆ ನಮ್ಮ ಕೊಡುಗೆ ಎಷ್ಟಿರುತ್ತದೆಯೊ ಅದಕ್ಕೆ ಬದಲಾಗಿ ಪರಿಸರ ನಮಗೆ ಅದರ ಹತ್ತುಪಟ್ಟು ಹೆಚ್ಚು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ತಹಸಿಲ್ದಾರ್ ಕುಂಞಿ ಅಹಮದ್, ಪ್ರಾಂಶುಪಾಲರಾದ ಡಾ: ಬಿ.ಕೆ ಲೋಕೇಶ್, ಪ್ರೊಫೆಸರ್ ರಾಜೇಂದ್ರ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಾಮಕೃಷ್ಣೇಗೌಡ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಂ.ಕೆ.ಮಂಜುನಾಥ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ದೇ.ರಾ .ಜಗದೀಶ ನಾಗಮಂಗಲ