ಕೊರೊನಾ ಕಣ್ಮರೆಯಾಗುವ ವರೆಗೂ ಕಲಿಕೆ ಬೇಡ

0
51

ವಾಡಿ: ನಾವು ಬಡವರು. ಕೂಲಿ ನಾಲಿ ಮಾಡಿ ಬದುಕುವವರು. ನಮ್ಮ ಮಕ್ಕಳೇ ನಮಗೆ ಆಸ್ತಿ. ಪ್ರಾಣ ತೆಗೆಯುವ ರೋಗ ಮನದಲ್ಲಿ ಭಯ ಬಿತ್ತಿದೆ. ಕೊರೊನಾ ರೋಗ ಕಣ್ಮರೆಯಾಗುವ ವರೆಗೂ ಮಕ್ಕಳನ್ನು ನಾವು ಶಾಲೆಗೆ ಕಳಿಸುವುದಿಲ್ಲ ಎಂದು ಪೋಷಕರು ಶಿಕ್ಷಕರ ಮುಂದೆ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಪ್ರಸಂಗ ನಡೆಯಿತು.

ಪಟ್ಟಣದ ಸರಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೋಷಕರ ಸಭೆಯಲ್ಲಿ ಮಾತನಾಡಿದ ವಿದ್ಯಾರ್ಥಿಗಳ ಪಾಲಕರು, ಆಗಸ್ಟ್ ನಂತರವೇ ಶಾಲೆ ಶುರು ಮಾಡ್ರಿ ಎಂದು ಸಲಹೆ ನೀಡಿದರು. ಜೀವ ಉಳಿದು ಆರೋಗ್ಯವಾಗಿದ್ದರೆ ಇಂದಲ್ಲ ನಾಳೆ ಮಕ್ಕಳಿಗೆ ಶಿಕ್ಷಣ ಕೊಡಿಸಬಹುದು. ರೋಗದ ಭಯ ಇದ್ದರೂ ಶಾಲೆ ತೆರೆದರೆ ಮುಂದಾಗುವ ಅನಾಹುತಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ ಪೋಷಕರು, ಕೊರೊನಾ ರೋಗ ಸಂಪೂರ್ಣ ನಿಯಂತ್ರಣಕ್ಕೆ ಬರುವ ವರೆಗೂ ಮಕ್ಕಳು ಮನೆಯಲ್ಲಿರಲಿ. ಯಾವುದಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿಕ್ಷಕರಲ್ಲಿ ಮನವಿ ಮಾಡಿದರು.

Contact Your\'s Advertisement; 9902492681

ಇದಕ್ಕೂ ಮೊದಲು ಮಾತನಾಡಿದ ಮುಖ್ಯಶಿಕ್ಷಕಿ ಲಲಿತಾ ದೊಡ್ಡಮನಿ, ಮಹಾಮಾರಿ ಕೊರೊನಾ ದೇಶವನ್ನು ಕಾಡುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರಕಾರದ ಸಮರ್ಪಕ ಚಿಕಿತ್ಸೆಯಿಂದ ಅನೇಕರು ಗುಣಮುಖರಾಗಿ ಮನೆಗೂ ಬರುತ್ತಿದ್ದಾರೆ. ಇದರ ನಡುವೆಯೂ ಶಾಲೆಗಳನ್ನು ತೆರೆಯಬೇಕೋ ಬೇಡವೋ ಎಂಬ ಕುರಿತು ಪಾಲಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಶಿಕ್ಷಣ ಇಲಾಖೆ ತೆಗೆದುಕೊಳ್ಳುವ ಅಂತಿಮ ನಿರ್ಧಾಕ್ಕೆ ಬದ್ಧರಾಗಿ ಮಕ್ಕಳ ಭವಿಷ್ಯ ಕಟ್ಟೋಣ ಎಂದರು.

ಎಸ್‍ಡಿಎಂಸಿ ಅಧ್ಯಕ್ಷೆ ತಾರಾಬಾಯಿ ಮಲ್ಲೇಶಿ, ಶಿಕ್ಷಕರಾದ ತ್ರಿಶೂಲಾದೇವಿ, ಜಯಶ್ರೀ ಕುಲಕರ್ಣಿ, ಶರಣಮ್ಮ, ಚಂದ್ರಕಾಂತ ಚವ್ಹಾಣ, ಮುಖ್ಯ ಪೇದೆ ಬಸಲಿಂಗಪ್ಪ ಮುನಗಲ್, ಪಾಲಕರಾದ ರಾಜು ಮರೆಪ್ಪ, ಕಾಶಿನಾಥ, ಸರೋಜಾ ಮತ್ತಿತರರು ಪಾಲ್ಗೊಂಡಿದ್ದರು. ಸಭೆಯ ಮಾಹಿತಿ ತಲುಪದ ಕಾರಣ ಬಹುತೇಕ ಪೋಷಕರು ಸಭೆಯಿಂದ ಹೊರಗುಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here