ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ಕಚೇರಿ ಅಸ್ತಿತ್ವಕ್ಕೆ

0
158

ಕಲಬುರಗಿ: ನಗರದ ಐವಾನ್-ಎ-ಶಾಹಿ ರಸ್ತೆಯ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ನೂತನ ಕಚೇರಿಯನ್ನು ಮಂಗಳವಾರ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಿಂದಲೆ ಆನ್‍ಲೈನ್ ಮೂಲಕ ಸಸಿಗೆ ನೀರೆರೆದು ಉದ್ಘಾಟಿಸಿದರು.

ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಅಣಿಯಾಗಿರುವ ಸಂಘದ ಅಧಿಕೃತ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಪ್ರದೇಶಕ್ಕೆ ದಾಸ್ಯ ಪದವಾಗಿದ್ದ “ಹೈದ್ರಾಬಾದ ಕರ್ನಾಟಕ” ವನ್ನು “ಕಲ್ಯಾಣ ಕರ್ನಾಟಕ” ಎಂದು ಮರುನಾಮಕರಣ ಮಾಡಿ ಇಲ್ಲಿನ ಬಹುಜನರ ಬೇಡಿಕೆ ಈಡೇರಿಸಲಾಗಿದೆ. ಬರೀ ನಾಮಕಾರಣ ಮಾಡಿದರೆ ಸಾಲದು, ನಿಜ ಅರ್ಥದಲ್ಲಿ ಪ್ರದೇಶದ ಕಲ್ಯಾಣವನ್ನು ಸಾಕಾರಗೊಳಿಸಲು ಆಯವ್ಯಯದಲ್ಲಿ 500 ಕೋಟಿ ರೂ. ಈ ಸಂಘಕ್ಕೆ ಮೀಸಲಿಟ್ಟಿದ್ದು, ಸಂಘದ ಮೂಲಕ ಇಲ್ಲಿನ ಜನರ ಕಲ್ಯಾಣಕ್ಕಾಗಿ ಕೆಲಸಗಳು ನಡೆಯಲಿವೆ ಎಂದರು.

Contact Your\'s Advertisement; 9902492681

ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ 15 ಜನರ ಆಡಳಿತ ಮಂಡಳಿಯು ಪ್ರದೇಶದ 6 ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸಂಘ ಶ್ರಮಿಸಲಿದೆ. ಒಟ್ಟಾರೆ ಜನರ ಕಲ್ಯಾಣಕ್ಕಾಗಿ ಸಂಘ ಕಾರ್ಯನಿರ್ವಹಿಸಲಿದೆ ಎಂದರು.

ಕೃಷಿ, ಶಿಕ್ಷಣ, ಸಾಹಿತ್ಯ, ಸ್ವಯಂ ಉದ್ಯೋಗ, ಆರೋಗ್ಯ, ಯುವಜನ ಮತ್ತು ಮಹಿಳಾ ಸಬಲೀಕರಣ, ಗ್ರಾಮ ಸಬಲೀಕರಣ ಹೀಗೆ ನಾನಾ ಕ್ಷೇತ್ರದಲ್ಲಿ ಪ್ರಗತಿಗೆ ಸಂಘವು ನಿರಂತರವಾಗಿ ಕಾರ್ಯನಿರ್ವಹಿಸಲಿದೆ. 3000 ಸಂಪರ್ಕ ಕೇಂದ್ರಗಳ ಮೂಲಕ ಆರೋಗ್ಯ, ವಿಚಾರ ಸಂಕಿರಣ, ಅರಿವು, ಸ್ವಯಂ ಉದ್ಯೋಗ ಕಲ್ಪಿಸುವ ಮೂಲಕ ಜನರ ಜೀವನ ಶೈಲಿಯಲ್ಲಿ ಅಮೂಲಗಾಗ್ರ ಬದಲಾವಣೆಗೆ ಸಂಘವು ನಾಂದಿ ಹಾಡಲಿದೆ. ಇದಕ್ಕೆ ಪೂರಕವಾಗಿ ಕಾರ್ಯಕ್ರಮಗಳು ಸಂಘದ ಮೂಲಕ ರೂಪುಗೊಳ್ಳಲಿವೆ ಎಂದರು.

ಇತ್ತ ಕಲಬುರಗಿಯಿಂದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಮಾತನಾಡಿ ಮುಖ್ಯಮಂತ್ರಿಗಳ ಆಶಯದಂತೆ ಮುಂದಿನ 3 ವರ್ಷಗಳಲ್ಲಿ ಸಂಘವು ಪ್ರದೇಶದಲ್ಲಿ ಮಾನವನ ಸಂಪೂರ್ಣ ವಿಕಸನಕ್ಕೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರ ಪ್ರಶಂಸಾರ್ಹ ರೀತಿಯಲ್ಲಿ ಕೆಲಸ ಮಾಡಲಿದೆ. ಸಹಕಾರ ಕಾಯ್ದೆಯಡಿ ರಚನೆಯಾಗಿರುವ ಮಂಡಳಿಗೆ ಸರ್ಕಾರವು 500 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕೆಕೆಆರ್‍ಡಿಬಿ ಮಂಡಳಿಗೆ ನೀಡುವ ಅನುದಾನದಲ್ಲಿ ಇದು ಸೇರಿಲ್ಲ ಎಂದು ಸ್ಪಷ್ಪಪಡಿಸಿದರು.

ಬಸವಕಲ್ಯಾಣವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಮುಖ್ಯಮಂತ್ರಿಯವರ ಅಶಯವಾಗಿದ್ದು, ಆ ನಿಟ್ಟಿನಲ್ಲಿಯೂ ಸಂಘ ಹೆಜ್ಜೆ ಇಡಲಿದೆ. ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಭವ್ಯ ಅನುಭವ ಮಂಟಪ ನಿರ್ಮಾಣ ಕಾರ್ಯ ಸಂಘದ ಮುಂದಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಸಂಘ-ಸಂಸ್ಥೆಗಳು ಸೇರಿದಂತೆ ಜನಸಾಮಾನ್ಯರ ಸಹಕಾರ ಪಡೆದು ಈ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಸಿದ್ಧೇಶ್ವರ ಸ್ವಾಮಿಗಳು ಮಾತನಾಡಿ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂಘವು ಕಾರ್ಯನಿರ್ವಹಿಸಲಿದೆ. ಇದು ಬಸವಣ್ಣನ ಭೂಮಿ, ಕೊಡುವುದುಂಟು ಕೇಳುವುದಲ್ಲ. ಇದರ ಮೂಲಾರ್ಥದಲ್ಲಿ ಸಂಘವು ಕಾರ್ಯನಿರ್ವಹಿಸಬೇಕಿದೆ. ಪ್ರದೇಶದಲ್ಲಿ ಬಡವ ಮತ್ತು ಕೊರತೆ ಎಂಬ ಶಬ್ದ ಉದ್ಭವಿಸದಂತೆ ಸಂಘವು ಕಾರ್ಯನಿರ್ವಹಿಸಬೇಕಿದೆ. ಹೃದಯ ವೈಶಾಲ್ಯತೆ, ತಲೆಯಲ್ಲಿ ಶ್ರೀಮಂತಿಕೆ ಹಾಗೂ ಕೈನಲ್ಲಿ ಸದಾ ಕೆಲಸಗಳಿದಲ್ಲಿ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ಹಿತವಚನ ನುಡಿದರು.

ಬಸವಣ್ಣನವರು ಸೇರಿದಂತೆ ಬಸವಾದಿ ಶರಣರು ನಡೆದಾಡಿದ ಈ ನಾಡಲ್ಲಿ ಬೇರೆ ಪ್ರದೇಶದ ಜನರು ವಾಸ ಮಾಡಲು ಹಾತೊರೆಯಬೇಕು. ಆ ನಿಟ್ಟಿನಲ್ಲಿ ಇಲ್ಲಿ ಸುಂದರ ಮತ್ತು ಸಂಪದ್ಭರಿತ ನಾಡನ್ನು ನಿರ್ಮಿಸಬೇಕಿದೆ ಎಂದು ಸಿದ್ದೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು.

ಕಚೇರಿ ಉದ್ಘಾಟನೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು. ಕಲಬುರಗಿಯಲ್ಲಿ ಸಂಸದ ಡಾ.ಉಮೇಶ ಜಾಧವ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಸೇಡಂನ ಪೂಜ್ಯ ಸದಾಶಿವ ಸ್ವಾಮಿಗಳು, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಸಂಘದ ಅಡಳಿತ ಮಂಡಳಿ ಸದಸ್ಯರಾದ ಈರೇಶ ಇಲ್ಲೂರ್, ಶ್ರೀನಿವಾಸ ನಂದಾಪೂರ, ವಿ.ಎಂ.ಭೂಸನೂರಮಠ, ಲೀಲಾ ಕಾರಟಗಿ, ಪ್ರಭುರಾಜ ಸಿದ್ದರಾಮಪ್ಪ, ಶಿವರಾಮೇಗೌಡ, ಬಾಬುಲಾಲ್ ಜೈನ್, ಪ್ರಭುದೇವ ಕಪ್ಗಲ್, ರೇವಣಸಿದ್ದಪ್ಪ ಜಾಲಾದಿ, ವಿ.ಶಾಂತರೆಡ್ಡಿ, ತಿಪ್ಪಣ್ಣರೆಡ್ಡಿ ಕೋಲಿ, ಮಂಜುಳಾ ಡೊಳ್ಳೆ, ದುರ್ದನಾ ಬೇಗಂ, ಹಣಮಂತ ರಾಣಪ್ಪ ತೆಗನೂರ, ನೀಲಕಂಠರಾಯ ಎಲ್ಹೇರಿ ಇದ್ದರು.

ಸಂಘದ ಕಾರ್ಯದರ್ಶಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರೆ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ ಪಾಟೀಲ ನಿರೂಪಿಸಿದರು. ಭಾರತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here