ಕಲಬುರಗಿ: ಜುಲೈ-2020ರ ಮಾಹೆಯಿಂದ ಈ ಭಾಗದ ಜನರ ಬೇಡಿಕೆಯಂತೆ ಪಡಿತರ ವ್ಯವಸ್ಥೆಯಲ್ಲಿ 3 ಕೆ.ಜಿ. ಅಕ್ಕಿಯೊಂದಿಗೆ 2 ಕೆ.ಜಿ. ಜೋಳ ವಿತರಣೆ ಮಾಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ. ಗೋಪಾಲಯ್ಯ ತಿಳಿಸಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿಯೊಂದಿಗೆ ಜೋಳ ನೀಡಿದರೆ ಮೈಸೂರು ಭಾಗದಲ್ಲಿ ಅಕ್ಕಿಯೊಂದಿಗೆ ರಾಗಿ ವಿತರಿಸಲಾಗುವುದು. ಇದಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ವಿತರಣೆಗೆ ಸಹ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೆ ಅದು ಸಹ ಪಡಿತರದಲ್ಲಿ ಸೇರಲಿದೆ ಎಂದರು.
ರಾಜ್ಯದಲ್ಲಿ 1.27 ಕೋಟಿ ಪಡಿತರ ಕಾರ್ಡುಗಳಿದ್ದು, 4.31 ಕೋಟಿ ಜನ ಪಡಿತರ ಫಲಾನುಭವಿಗಳಿದ್ದಾರೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಆಹಾರ ದೊರಕಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಆದರಿಂದಲೆ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಪಡಿತರ ಚೀಟಿಗೆ ಹೊಸದಾಗಿ ಅರ್ಜಿ ಸಲ್ಲಿಸಿದ 1.18 ಲಕ್ಷ ಪಡಿತರ ಕುಟುಂಬಕ್ಕೂ 10 ಕೆ.ಜಿ.ಅಕ್ಕಿಯನ್ನು ನೀಡಲಾಗಿದೆ. ಅದೇ ರೀತಿ ಬೇರೆ ರಾಜ್ಯದ ನಿವಾಸಿಗಳಿಗೆ ಪಡಿತರ ಚೀಟಿ ಇಲ್ಲದಿದ್ದರೂ ಸಹ ಆಧಾರ್ ಕಾರ್ಡ್ ಮೇಲೆ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಮತ್ತು 2 ಕೆ.ಜಿ. ಕಡಲೆ ಬೇಳೆ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಾಲಾಜಿ, ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಿ.ಎಂ.ಪಾಣಿ ಇದ್ದರು.