ಕಲಬುರಗಿ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಂಸ್ಕೃತಿಕ ಸಂಘಕ್ಕೆ ಆಡಳಿತಾತ್ಮಕ ಸಲಹೆಗಾರರನ್ನಾಗಿ ಕಲ್ಯಾಣ ಕರ್ನಾಟಕ ಭಾಗದವರನ್ನು ಬಿಟ್ಟು ಅನ್ಯ ಪ್ರದೇಶದವರನ್ನು ನೇಮಿಸಿಕೊಳ್ಳಲು ಮುಂದಾಗಿರುವುದು ಖಂಡನೀಯವಾಗಿದ್ದು, ಕೂಡಲೇ ಈ ಪ್ರಕ್ರಿಯೆಯನ್ನು ಕೈಬಿಟ್ಟು ಕಲ್ಯಾಣ ಕರ್ನಾಟಕ ಭಾಗದವರನ್ನೇ ಆಡಳಿತಾತ್ಮಕ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವಂತೆ ಹೋರಾಟಗಾರ ನಾಗಲಿಂಗಯ್ಯ ಮಠಪತಿ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಅವರು ಕಲ್ಯಾಣ ಕರ್ನಾಟಕದ ಸಮಸ್ಯೆ, ಸವಾಲುಗಳು, ಬದುಕು ಬವಣೆ ಅರಿಯದವರನ್ನು ಯಾವ ಕಾರಣಕ್ಕಾಗಿ ನೇಮಿಸಿಕೊಳ್ಳಲು ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ರವರು ಮುಂದಾಗಿದ್ದಾರೆ, ಇದು ಸಮಂಜಸವಾದ ನಿರ್ಧಾರವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಅನೇಕ ಜನ ಮಹನೀಯರು ಹಗಲಿರುಳು ದುಡಿದಿದ್ದಾರೆ. ಸಂವಿಧಾನದ ೩೭೧ ನೇ ಕಲಂ ತಿದ್ದುಪಡಿಗಾಗಿ ಹೋರಾಟ ಮಾಡಿದ್ದಾರೆ. ಅನೇಕ ಪ್ರಕರಣಗಳನ್ನು ಮೈಮೇಲೆ ಹಾಕಿಕೊಂಡು ನಿರಂತರವಾಗಿ ಧ್ವನಿ ಎತ್ತಿದ್ದಾರೆ.
ಈಗಾಗಲೇ ಈ ಭಾಗಕ್ಕೆ ಅನ್ಯಾಯವಾಗುತ್ತಿರುವುದನ್ನು ಮನಗಂಡು ಅಸಮಾನತೆ ನಿವಾರಿಸಿ ಸಮಗ್ರ ಅಭಿವೃದ್ಧಿಯ ಆಶಯದಿಂದ ಸರ್ಕಾರ ಸಂಘ ಸ್ಥಾಪಿಸಿದ್ದು ಸಂಘದ ಸಲಹೆಗಾರರ ನೇಮಕಾತಿಯಲ್ಲಿಯೂ ಸಹ ಅನ್ಯಾಯವಾಗುತ್ತಿರುವುದು ಆಶ್ಚರ್ಯವಾಗಿದ್ದು ಇಂತಹ ಸಂದರ್ಭದಲ್ಲಿ ಸ್ಥಳೀಯ ತಜ್ಞರನ್ನು ದೂರ ಸರಿಸಿ ಅನ್ಯರಿಗೆ ಮಣೆ ಹಾಕುತ್ತಿರುವ ಹಿಂದಿರುವ ಉದ್ದೇಶವೇನೆಂದು ಪ್ರಶ್ನಿಸಿರುವ ಅವರು ನಮ್ಮ ಭಾಗದಲ್ಲೇ ರಾಜ್ಯ, ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರು ಮತ್ತು ತಜ್ಞರಿದ್ದಾರೆ. ಬೇಕಾದರೆ ಸೇಡಂ ರವರು ಅವರ ಸಂಸ್ಥೆಗಳಿಗೆ ಅನ್ಯ ಪ್ರದೇಶದವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಳ್ಳಲಿ.
ಅದನ್ನು ಬಿಟ್ಟು ಸರಕಾರದ ಸಂಸ್ಥೆಗೆ ಅನ್ಯ ಭಾಗದವರನ್ನು ನೇಮಕ ಮಾಡುವುದಕ್ಕೆ ತಮ್ಮ ವಿರೋಧವಿದ್ದು ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳುವಂತೆ ಅವರಲ್ಲಿ ಕೋರಲಾಗುವುದು. ಒಂದು ವೇಳೆ ಇದನ್ನು ಮೀರಿಯೂ ಅನ್ಯ ಪ್ರದೇಶದವರನ್ನೇ ನೇಮಕ ಮಾಡಿಕೊಂಡರೆ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.