ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸ್ ಮೇಲೆ ದಾಳಿಗಳು ಮುಂದುವರೆದಿವೆ. ಚಿತ್ತಾಪುರ ತಾಲೂಕಿನಲ್ಲಿ ಆಶಾ ಕಾರ್ಯಕರ್ತೆಯ ಮೇಲಿನ ಹಲ್ಲೆ ಮಾಸುವ ಮುನ್ನವೇ ಕಮಲಾಪುರ ತಾಲೂಕಿನಲ್ಲಿ ಮತ್ತೊಂದು ಹಲ್ಲೆ ಘಟನೆ ನಡೆದಿದೆ.
ವೈದ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿಲಾಗಿದೆ. ಈ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಪೊಲೀಸ್ ವಾಹನ, ಆ್ಯಂಬುಲೆನ್ಸ್ ಹಾಗೂ ಮತ್ತಿತರ ವಾಹನಗಳು ಜಖಂ ಆಗಿವೆ.
ಮುಂಬೈಯಿಂದ ವಾಪಸ್ಸಾದ ವಲಸಿಗರ ಪೈಕಿ 14 ಜನರಿಗೆ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು ಆರೋಗ್ಯ ಇಲಾಖೆ ಸಿಬ್ಬಂದಿ ಪೊಲೀಸರ ಜೊತೆ ತಾಂಡಾಕ್ಕೆ ತೆರಳಿತ್ತು. ಈ ವೇಳೆ ತಾಂಡಾದ ನಿವಾಸಿಗಳು ಏಕಾಏಕಿ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪೊಲೀಸ್ ವಾಹನ, ಆ್ಯಂಬುಲೆನ್ಸ್, ಆರೋಗ್ಯ ಇಲಾಖೆ ಸಿಬ್ಬಂದಿಯ ವಾಹನಗಳ ಮೇಲೆ ಕಲ್ಲು ತೂರಲಾಗಿದ್ದು, ಗಾಜುಗಳು ಪುಡಿಪುಡಿಯಾಗಿವೆ. ಈ ವೇಳೆ ವೈದ್ಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ಸಂಬಂಧ ಜಿಲ್ಲಾಧಿಕಾರಿ ಶರತ್ ಬಿ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಇಂತಹ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸೋದಿಲ್ಲ. ಕೊರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದವ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆಯೂ ಕಲಬುರ್ಗಿಲ್ಲಿ ಈ ರೀತಿ ಘಟನೆಯಾಗಿತ್ತು. ಇದೀಗ ಕಮಲಾಪುರ ತಾಲೂಕಿನಲ್ಲಿ ಘಟಿಸಿದೆ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸೋಲ್ಲ. ಹಲ್ಲೆಕೋರರ ಮೇಲೆ ಕಠಿಮ ಕ್ರಮ ಖಚಿತ. ಕೊರೋನಾ ವಾರಿಯರ್ಸ್ ರಕ್ಷಣೆಗೆ ಜಿಲ್ಲಾಡಳಿತ ಬದ್ಧವಾಗಿದೆ” ಎಂದಿದ್ದಾರೆ.
ಕಲಬುರಗಿಯಲ್ಲಿ ಕೊರೊನಾ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ಅದರಲ್ಲಿಯೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಿಂದ ಸೋಂಕು ವ್ಯಾಪಕಗೊಳ್ಳಲಾರಂಭಿಸಿದೆ. ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ಮತ್ತಿತ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಕೊರೋನಾ ವಾರಿಯರ್ಸ್ ಮೇಲೆ ಕಲಬುರಗಿ ಜಿಲ್ಲೆಯಲ್ಲಿ ದಾಳಿಗಳು ಮುಂದುವರೆದಿವೆ.