ಕಲಬುರಗಿ: ನಗರದ ಐವಾನ್-ಎ-ಶಾಹಿ ರಸ್ತೆಯ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ಆಯೋಜಿಸಲಾದ ಸಸ್ಯೆ ಸಂತೆ ಮತ್ತು ತೋಟಗಾರಿಕೆ ಅಭಿಯಾನಕ್ಕೆ ಬುಧವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ ಅವರು ಚಾಲನೆ ನೀಡಿದರು.
ಸಸ್ಸಯ ಸಂತೆಯಲ್ಲಿ ಮಾರಾಟಕ್ಕೆ ಇಡಲಾದ ಹಣ್ಣು. ತರಕಾರಿ, ಆಲಂಕರಿಕ ಗಿಡಗಳನ್ನು ವೀಕ್ಷಿಸಿ ಮಾತನಾಡಿದ ಅವರು ಜೂನ್ 17 ರಿಂದ 30ರ ವರಗೆ ಈ ಸಸ್ಯ ಸಂತೆ ಮತ್ತು ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ತೋಟಗಾರಿಕೆ, ಹಣ್ಣು, ಹೂವು ಹಾಗೂ ಆಲಂಕಾರಿಕ ಗಿಡಗಳು ಸೇರಿದಂತೆ ಒಟ್ಟಾರೆ 2.50 ಲಕ್ಷ ಕಸಿ/ ಸಸಿಗಳು ಕಡಿಮೆ ದರದಲ್ಲಿ ಮಾರಾಟಕ್ಕೆ ಲಭ್ಯಗಳಿವೆ. ಸಾರ್ವಜನಿಕರು ತಮ್ಮ ಮನೆಯಲ್ಲಿಯೂ ಬೆಳೆಸಬಹುದಾದಂತಹ ಗಿಡಗಳು ಇಲ್ಲಿದ್ದು, ರೈತರು ಮತ್ತು ಸಾರ್ವಜನಿಕರು ಇದರ ಲಾಭ ಪಡೆಯಬೇಕು ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಇಲಾಖೆಯು ರೈತಾಪಿ ವರ್ಗದ ಕೂಲಿ ಕಾರ್ಮಿಕರಿಂದ ಸಸ್ಯಗಳನ್ನು ಅಭಿವೃದ್ಧಿಪಡಿಸಿ ಕೂಲಿ ಕಾರ್ಮಿಕರಿಗೆ ಹಣ್ಣು, ತರಕಾರಿ, ನುಗ್ಗೆ, ಕರಿಬೇವುದಂತಹ ಸಸಿಗಳನ್ನು ಉಚಿತವಾಗಿ ನೀಡಿ ಗ್ರಾಮೀಣ ಭಾಗದಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣಕ್ಕೆ ಹೆಚ್ಚಿನ ಅವಕಾಶ ಮಾಡಿಕೊಡಬೇಕು ಎಂದು ಡಾ.ಪಿ.ರಾಜಾ ತಿಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪುರ ಪಾಟೀಲ ಮಾತನಾಡಿ ರೈತರಿಗೆ ಕೃಷಿಯೊಮದಿಗೆ ತೋಟಗಾರಿಕೆ ಮತ್ತು ಹೈನುಗಾರಿಕೆ ಎರಡು ಕಣ್ಣುಗಳಿದ್ದಂತೆ. ರೈತ ಸಮುದಾಯ ದೀರ್ಘಕಾಲದ ಬೆಳೆಗಳಿಗೆ ಮಾತ್ರ ಜೋತು ಬೀಳದೆ ಆದಾಯ ತರುವ ತೋಟಗಾರಿಕೆ, ಹಣ್ಣು ಮತ್ತು ತರಕಾರಿ ಗಿಡಗಳನ್ನು ಸಹ ಬೆಳೆಸುವ ಮೂಲಕ ಅರ್ಥಿಕ ಚೇತರಿಕೆ ಕಾಣಬೇಕು. ನಗರ ಪ್ರದೇಶದಲ್ಲಿ ಸಾರ್ವಜನಿಕರು ತಮ್ಮ ಮನೆಯ ಟೆರಸ್ ಮೇಲೆ ತರಕಾರಿ ಮತ್ತು ಆಲಂಕಾರಿಕ ಗಿಡಗಳನ್ನು ಬೆಳೆಸಬಹುದಾಗಿದೆ. ಕಿಚನ್ ಗಾರ್ಡನ್‍ಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೆಳಗಾವಿಯಲ್ಲಿ ಇದನ್ನು ಮಾಡಲಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ ಮಾತನಾಡಿ ಜಿಲ್ಲೆಯಲ್ಲಿ 21210 ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದ್ದು, ತೋಟಗಾರಿಕೆ ಬೆಳೆಗಳ ಪ್ರದೇಶದ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಸಸ್ಯ ಸಂತೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಎಲ್ಲಾ ತೋಟಗಾರಿಕೆ ಕ್ಷೇತ್ರದಲ್ಲಿ 254180 ಕಸಿ/ ಸಸಿಗಳು ಮಾರಾಟಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಇದರಲ್ಲಿ 89334 ಹಣ್ಣು, 54285 ಆಲಂಕಾರಿಕ, 14935 ತೆಂಗು ಸಸಿಗಳು ಮತ್ತು 200 ಔಷಧಿ ಸಸಿಗಳು ಬ್ಯಾಗ್ ಮತ್ತು ಪ್ಲಾಸ್ಟಿಕ್ ಕುಂಡದಲ್ಲಿ ಮಾರಾಟಕ್ಕೆ ಲಭ್ಯವಿದೆ. ಉತ್ಪಾದನಾ ವೆಚ್ಚ ಆಧರಿಸಿ ಪ್ರತಿ ಕಸಿ/ ಸಸಿಗಳಿಗೆ ಕಡಿಮೆ ದರ ನಿಗದಿಪಡಿಸಲಾಗಿದೆ. ಈ ವರ್ಷ ಒಟ್ಟಾರೆ 3.50 ಲಕ್ಷ ಮೊತ್ತದ ಕಸ/ ಸಸಿಗಳು ಮಾರಾಟವಾಗುವ ನಿರೀಕ್ಷೆಯಿದೆ. ಕಳೆದ ವರ್ಷ 2.20 ಲಕ್ಷ ಮೊತ್ತದ ಕಸಿ/ ಸಸಿಗಳು ಮಾರಾಟವಾಗಿದ್ದವು ಎಂದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಜಂಟಿ ನಿರ್ದೇಶಕ ಶ್ರೀಶೈಲ್ ದಿಡ್ಡಿಮನಿ ಸೇರಿದಂತೆ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಮತ್ತು ರೈತರು ಇದ್ದರು.
ಸಸಿ-ಕಸಿಗಳ ದರಗಳು: ಮಾವು ಕಸಿ-22 ರೂ., ಸೀಬೆ ಕಸಿ-35 ರೂ., ತೆಂಗು ಸಸಿ-60 ರೂ., ತೆಂಗೂ (ಟಿ*ಡಿ)-22 ರೂ., ನೇರಳೆ ಕಸಿ-30 ರೂ., ಕರಿಬೇವು ಸಸಿ- 10 ರೂ., ನಿಂಬೆ ಕಸಿ-12 ರೂ., ನುಗ್ಗೆ ಸಸಿ-8 ರೂ. ಹಾಗೂ ಆಲಂಕಾರಿಕ ಗಿಡಗಳು-20 ರೂ. ಇವೆ. ಅದೇ ರೀತಿ ಆಲಂಕಾರಿಕ ಕುಂಡಗಳು(6 ಇಂಚ್)-20 ರೂ., ಆಲಂಕಾರಿಕ ಕುಂಡಗಳು(9 ಇಂಚ್)-55 ರೂ. ಹಾಗೂ ಆಲಂಕಾರಿಕ ಕುಂಡಗಳು (12 ಇಂಚ್)-110 ರೂ. ಗಳಿಗೆ ಮಾರಾಟ ಮಾಡಲಾಗುತ್ತದೆ. ಸಾರ್ವಜನಿಕರು ಮತ್ತು ರೈತರು ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ಬಂದು ನಿಗದಿತ ಮೊತ್ತ ಪಾವತಿಸಿ ಸಸಿಗಳನ್ನು ಪಡೆಯಬಹುದಾಗಿದೆ.