ಕಲಬುರಗಿ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಸೌಲಭ್ಯ ಪಡೆಯುವ ಗರ್ಭಿಣಿ ಮಹಿಳೆಯರ ಮಾಹಿತಿಯನ್ನು ತಂತ್ರಾಂಶದಲ್ಲಿ ತಪ್ಪಾಗಿ ಒದಗಿಸುತ್ತಿರುವುದನ್ನು ತಡೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಯಡಿ ಮೊದಲನೇ ಹೆರಿಗೆಗೆ ಮಾತ್ರ 5000 ರೂ.ಗಳಂತೆ ಪ್ರೋತ್ಸಾಹಧನ ನಿಡಲಾಗುತ್ತದೆ. 2ನೇ ಮತ್ತು 3ನೆ ಹೆರಿಗೆಗೆ ಪ್ರೋತ್ಸಾಹಧನ ಪಡೆಯಲು ತಪ್ಪು ಮಾಹಿತಿ ನೀಡುವ ಸಾಧ್ಯತೆಯಿದ್ದು, ಇದರ ಬಗ್ಗೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಸೂರು ಕಲ್ಪಿಸಬೇಕಾಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿವೇಶನ ಒದಗಿಸಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿರುವ 1182 ಲಿಂಗತ್ವ ಅಲ್ಪಸಂಖ್ಯಾತರ ಪೈಕಿ ಅಗತ್ಯವಿದ್ದವರಿಗೆ ಅಂಬೇಡ್ಕರ್, ಬಸವ ಹಾಗೂ ರಾಜೀವ ಗಾಂಧಿ ವಸತಿ ಯೋಜನೆಯಡಿ ನಿವೇಶನ ಒದಗಿಸಲು ಕ್ರಮ ವಹಿಸಬೇಕು ಮತ್ತು ಲಾಕ್ ಡೌನ್ ಹಿನ್ನೆಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತುಂಬಾ ಸಂಕಷ್ಟದಲ್ಲಿದ್ದು, ಅವರಿಗೆ ಸೂಕ್ತ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೋಷಣ ಅಭಿಯಾನ ಆಂದೋಲನವಾಗಲಿ: ಪೆÇೀಷಣ ಅಭಿಯಾನದಡಿಯಲ್ಲಿ ಅಂಗನವಾಡಿಗಳಲ್ಲಿ ಪ್ರತಿ ತಿಂಗಳ 1ನೇ ಮತ್ತು 3ನೇ ಶುಕ್ರವಾರ ಗರ್ಭಿಣಿ ಸ್ತ್ರೀಯರ ಮತ್ತು ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ಅನ್ನ ಪ್ರಾಸನ್ನ, ಸೂಪೋಷಣ ಕಾರ್ಯಕ್ರಮಗಳು ಹೆಚ್ಚಿನ ಜನರಿಗೆ ತಲುಪಲು ಆಂದೋಲನ ರೂಪದಲ್ಲಿ ಕಾರ್ಯಕ್ರಮಗಳು ಹಮ್ಮಿಕೊಂಡು ಸರ್ಕಾರದ ಉದ್ದೇಶ ಈಡೇರಬೇಕು ಮತ್ತು ಮಹಿಳಾ ಶಕ್ತಿ ಕೇಂದ್ರಗಳ ಮೂಲಕ ಮಹಿಳೆಯರಿಗೆ ವಿವಿಧ ಇಲಾಖೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ಏಪ್ರಿಲ್ ದಿಂದ ಇಲ್ಲಿಯವರೆಗೆ 37 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದ್ದು, ಈ ವರ್ಷದಲ್ಲಿ ಯಾವುದೇ ಬಾಲ್ಯ ವಿವಾಹವಾದ ಪ್ರಕರಣ ವರದಿಯಾಗಿಲ್ಲ ಎಂದು ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಜಿ.ಎಸ್.ಗುಣಾರಿ ಅವರು ವಿವಿಧ ಸಮಿತಿಗಳ ಚರ್ಚಿಸಬೇಕಾದ ವಿಷಯಗಳನ್ನು ಸಭೆಯಲ್ಲಿ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಗೋಮತಿ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಂತೋಷ ಸಪ್ಪಂಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ, ಎಲ್ಲಾ ತಾಲೂಕಿನ ಸಿ.ಡಿ.ಪಿ.ಓ.ಗಳು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಅಧಿಕಾರಿಗಳು, ವಸತಿ ನಿಲಯಗಳ ಅಧೀಕ್ಷಕರು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.