ಚಿತ್ತಾಪುರ: ಕೊರೊನ್ ವೈರಸ್ ಕೋವಿಡ್-19, ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಂದಿನಿಂದ ಆರಂಭವಾಗುತ್ತಿದ್ದು ಈ ನಡುವೆ ಪರೀಕ್ಷೆ ಕೊಠಡಿಗೆ ಆಗಮಿಸುವ ಮುನ್ನ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪರೀಕ್ಷೆ ಕೊಠಡಿಗೆ ತೆರಳುತ್ತಿರುವ ಸನ್ನಿವೇಶ ಕಂಡುಬಂದಿತು.
ತಾಲೂಕಿನಲ್ಲಿ ಒಟ್ಟು 24 ಕೇಂದ್ರಗಳಲ್ಲಿ 5,626 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು 57 ವಿದ್ಯಾರ್ಥಿಗಳು ಹೊರ ಜಿಲ್ಲೆಯವರಾಗಿದ್ದಾರೆ.
ಪಟ್ಟಣದ ಮೂರು ಕೇಂದ್ರಗಳಾದ ಸರ್ಕಾರಿ ಬಾಲಕರ ಪ್ರೌಢಶಾಲೆ,252 ವಿದ್ಯಾರ್ಥಿಗಳಲ್ಲಿ ಗಂಡು-151, ಹೆಣ್ಣು-101, ಮಹಾತ್ಮ ಗಾಂಧಿ ಪ್ರೌಢಶಾಲೆ, 149 ವಿದ್ಯಾರ್ಥಿಗಳಲ್ಲಿ ಗಂಡು-85, ಹೆಣ್ಣು-64, ಮತ್ತು ಆದರ್ಶ ವಿದ್ಯಾಲಯದಲ್ಲಿ 457 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶಂಕ್ರಮ್ಮ ಢವಳಗಿ ತಿಳಿಸಿದರು.
ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆ ಕೊಠಡಿಗೆ ಕಳಿಸಿ ಕೊಡುವ ಮುನ್ನ ಸ್ಥಳೀಯ ಪ್ರಾಥಮಿಕ ಕೇಂದ್ರದ ಸಿಬ್ಬಂದಿಯೊಂದಿಗೆ ಥರ್ಮೋಮೀಟರ್ ನಿಂದ ವಿದ್ಯಾರ್ಥಿಗಳ ದೇಹದ ತಾಪಮಾನವನ್ನು ಪರೀಕ್ಷೆ ಮಾಡಿ ಹಾಗೂ ಮಾಸ್ಕ್ ಸ್ಯಾನಿಟೈಸರ್ ಅನ್ನು ನೀಡಿ ಸರ್ಕಾರದ ಸೂಚನೆ ಮಾಡಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ತಪಾಸಣೆ ಮಾಡುತ್ತಿರುವುದು ಕಂಡುಬಂದಿತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಇದ್ದಿತು.