ಸಾಹಿತ್ಯ ಕೃತಿ
ಡಾ. ಗೀತಾ ನಾಗಭೂಷಣ ಅವರು 1968ರ ವರ್ಷದಲ್ಲಿ ಪ್ರಕಟಗೊಂಡ ‘ತಾವರೆಯ ಹೂವು ಕಾದಂಬರಿಯಿಂದ ಮೊದಲ್ಗೊಂಡು ಇತ್ತೀಚಿನ ‘ಬದುಕು ’ ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ‘ಬದುಕು’ ಕಾದಂಬರಿಗೆ 2004ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಗೀತಾ ನಾಗಭೂಷಣರ ‘ಹಸಿಮಾಂಸ ಮತ್ತು ಹದ್ದುಗಳು’ ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ಕೊಡುಗೆ ಹಲವಾರು.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷಣಿಯಾಗಿ ಸಂಪಾದಿಸಿ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಡಾ. ಗೀತಾ ನಾಗಭೂಷಣರು ಹೇಳಿದ ಮಾತುಗಳು ಮಾರ್ಮಿಕವಾಗಿವೆ. “ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ.”
ಪ್ರಶಸ್ತಿ ಗೌರವಗಳು
ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್,
ಅತ್ತಿಮಬ್ಬೆ ಪ್ರಶಸ್ತಿ,
ನಾಡೋಜ ಪ್ರಶಸ್ತಿ ಮುಂತಾದ ಹಲವಾರು ಗೌರವಗಳ ಜೊತೆಗೆ,
ಡಾ. ಗೀತಾ ನಾಗಭೂಷಣರು ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.
2012ರ ವರ್ಷದಲ್ಲಿ ಡಾ. ಗೀತಾನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದುಕೊಟ್ಟಿದ್ದಾರೆ.
ಅವರ ‘ಬದುಕು’ ಕಾದಂಬರಿಗೆ 2004 ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ.
ಸಂಗ್ರಹ: ಮಹಿಪಾಲರೆಡ್ಡಿ ಮುನ್ನೂರ್