ಲಿಂಗಸುಗೂರು: ಕರ್ನಾಟಕ ಪ್ರಾಂತ ರೈತ ಸಂಘಟನೆ(KPRS) ಲಿಂಗಸ್ಗೂರು ತಾಲೂಕು ಸಮಿತಿಯಿಂದ ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿಗಳನ್ನು ವಿರೋಧಿಸಿ, ರೈತಾಪಿ ಕೃಷಿಗೆ ಆಗ್ರಹಿಸಿ ಹಾಗೂ ಸಮರ್ಪಕ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಕಾಯ್ದೆ ಹಾಗೂ ಬೀಜ ಕಾಯ್ದೆಗಳ ತಿದ್ದುಪಡಿ 2020ಗಳನ್ನು ಕೂಡಲೇ ಕೈ ಬಿಟ್ಟು ರೈತ ಪರವಾದ ಕಾಯ್ದೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕೋವಿಡ್ 19 ಸಂಕಷ್ಟದಲ್ಲಿರುವ ಎಲ್ಲಾ ಜನರಿಗೆ 7,500 ರೂಪಾಯಿ ಸಹಾಯ ಧನ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಸಭೆ, ಮತ್ತು ಪಟ್ಟಣ ಪಂಚಾಯತ್ ಪ್ರದೇಶಕ್ಕೆ ವಿಸ್ತರಿಸಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಿ ಕೂಲಿಯನ್ನು 600 ರೂಪಾಯಿಗೆ ನಿಗಧಿಗೊಳಿಸಬೇಕೆಂದು ಒತ್ತಾಯಿಸಿದರು.
ಮನೆಗಳನ್ನು ಪಂಚಾಯತ್ ಅಧಿಕಾರಿಗಳು ಸದಸ್ಯರು 20-30 ಸಾವಿರ ರೂಪಾಯಿ ಗೆ ಮಾರಾಟ ಮಾಡುತ್ತಿದ್ದು ತಡೆಯಬೇಕು. ವಸತಿ ಹೀನರಿಗೆ ನಿವೇಶನ ಮನೆಗಳನ್ನು ಮಂಜೂರು ಮಾಡಬೇಕು. ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ಮೈಕ್ರೋ ಫೈನಾನ್ಸ್ ಗಳ ಸಾಲ ಮನ್ನಾ ಮಾಡಬೇಕು, ಕೊವಿಡ್ ಸೊಂಕಿತರಿಗೆ ಸರ್ಕಾರವೇ ಉಚಿತ ಚಿಕಿತ್ಸೆ ನೀಡಬೇಕು. ಸರ್ಕಾರಿ ಭೂಮಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷರ ರಮೇಶ ವೀರಾಪೂರು, ಕೆಪಿಆರ್ ಎಸ್ ತಾಲೂಕು ಅಧ್ಯಕ್ಷ ಮಾನಪ್ಪ ಲೆಕ್ಕಿಹಾಳ, ತಾಲೂಕು ಮುಖಂಡರಾದ ಸದ್ದಾಂ ಹುಸೇನ್, ಮಹಮ್ಮದ್ ಸಾಬ್, ಚಾಂದ್ ಪಾಷಾ, ನಿಲೋಗಲ್ ಗ್ರಾಮ ಘಟಕದ ಮುಖಂಡ ಸಿದ್ದಪ್ಪ ಪೂಜಾರಿ, ವೀರಾಪೂರು ಗ್ರಾಮ ಘಟಕದ ಮುಖಂಡ ಬಸವರಾಜ್ ಸೇಟ್, ಕೃಷಿ ಕೂಲಿಕಾರ ಸಂಘಟನೆಯ ನೀಲಮ್ಮ, ಶರಬಮ್ಮ, ಎಸ್ಎಫ್ಐ ತಾಲೂಕು ಅಧ್ಯಕ್ಷ ತಿಪ್ಪಣ್ಣ ನಿಲೋಗಲ್, ಉಪಾಧ್ಯಕ್ಷ ಅಮರೇಗೌಡ, ಮಹೇಶ್, ಡಿವೈಎಫ್ಐ ಹನುಮಂತ ಭೋವಿ ಸೇರಿದಂತೆ ಅನೇಕರು ಇದ್ದರು.