ವಾಡಿ: ತುಂಬಿ ಹರಿಯುವ ನದಿಗಳ ನೀರನ್ನು ನಿರ್ದಯೆವಾಗಿ ಸಮುದ್ರಗಳಿಗೆ ಸೇದಂತೆ ಅವಕಾಶ ನೀಡದೆ, ಕೆರೆಕಟ್ಟೆಗಳನ್ನು ತುಂಬಿಸಲು ಮುಂದಾಗಬೇಕು ಎಂದು ಪ್ರಗತಿಪರ ಸಾಮಾಜಿಕ ಕಾರ್ಯಕರ್ತ, ಶಿಕ್ಷಕ ರಮೇಶ ಮಾಶಾಳ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ರಾಜ್ಯ ಸರಕಾರದ ನೀರಾವರಿ ಮಂತ್ರಿ ರಮೇಶ ಜಾರಕಿಹೊಳಿ ಅವರಿಗೆ ಪತ್ರ ಬರೆದಿರುವ ಶಿಕ್ಷಕ ರಮೇಶ, ಜೀವಜಲ ಪೋಲಾಗದಂತೆ ಕಾಪಾಡಲು ಮನವಿ ಮಾಡಿದ್ದಾರೆ. ಈ ಬಾರಿ ಉತ್ತಮ ಆರಂಭ ನೀಡಿರುವ ಷರ್ವಧಾರೆಯಿಂದ ಕಲ್ಯಾಣ ನಾಡಿನ ಜಲಾಶಯಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ನದಿಗಳ ಮೂಲಕ ಸಮುದ್ರವನ್ನು ಸೇರಲು ಅವಕಾಶ ನೀಡದೆ, ನೀರಿಲ್ಲದೆ ಒಣಗಿರುವ ಕಲ್ಯಾಣ ಕರ್ನಾಟಕದ ನೂರಾರು ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಭೂಮಿಯ ತೇವಾಂಶ ಕಾಪಾಡುವುದಲ್ಲದೆ ಅಂರ್ಜಲದ ಸಂರಕ್ಷಣೆಯಾಗುತ್ತದೆ.
ಒಣಭೂಮಿ ರೈತರ ಜಮೀನುಗಳಿಗೆ ನೀರು ಹರಿದು ಬೇಸಾಯ ಚೇತರಿಸಿಕೊಳ್ಳುತ್ತದೆ. ಪ್ರಾಣಿ, ಪಕ್ಷಿ, ಜೀವರಾಶಿಗಳಿಗೆ ಕುಡಿಯಲು ನೀರಾಗುತ್ತದೆ. ಪೋಷಣೆಯ ಕೊರತೆಯಿಂದ ಕಣ್ಮರೆಯಾಗುತ್ತಿರುವ ಕೆರೆಗಳಿಗೆ ಮತ್ತೆ ಮರುಜೀವ ನೀಡಬೇಕಾದ ಅಗತ್ಯತೆಯಿದೆ. ಆ ಮೂಲಕ ಅವುಗಳನ್ನು ಉಳಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.