ಕಲಬುರಗಿ: ಕೋವಿಡ್-೧೯ ಹೆಮ್ಮಾರಿಗೆ ಬಲಿಯಾದ ವ್ಯಕ್ತಿಯ ಶವವನ್ನು ಜನನಿಬಿಡ ಪ್ರದೇಶದಲ್ಲಿ ಕದ್ದುಮುಚ್ಚಿ ಅಂತ್ಯಕ್ರಿಯೆ ಮಾಡಲಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಳೆದ ೪ರಂದು ಜಿಲ್ಲೆಯಲ್ಲಿ ಮೂವರು ಕೋವಿಡ್-೧೯ ವ್ಯಕ್ತಿಗಳು ಮೃತರಾಗಿದ್ದು, ಅವರಲ್ಲಿ ಒಬ್ಬಾತನ ಶವದ ಅಂತ್ಯಕ್ರಿಯೆಯನ್ನು ಜನವಸತಿ ಪ್ರದೇಶವಾದ ಆಳಂದ್ ರಸ್ತೆಯ ವಿಜಯನಗರ ಕಾಲೋನಿಯ ಖಬರಸ್ತಾನದಲ್ಲಿ ಕದ್ದುಮುಚ್ಚಿ ಅಂತ್ಯಕ್ರಿಯೆ ಮಾಡಿದ್ದು, ಸುತ್ತಮುತ್ತಲಿನ ಜನರು ಭಯಭೀತಿಗೊಳ್ಳುವಂತೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಂತ್ಯಕ್ರಿಯೆಯನ್ನು ರಾತ್ರಿ ೧೦-೩೦ಕ್ಕೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾಡಿದ್ದಾರೆ. ಆ ಪ್ರದೇಶದಲ್ಲಿ ೪೫೦ ವಿದ್ಯಾರ್ಥಿಗಳು ಇರುವ ಸರ್ಕಾರಿ ಪ್ರಾಥಮಿಕ ಶಾಲೆ ಇದೆ. ಮಕ್ಕಳ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಗಳೂ ಇವೆ. ಇಂತಹ ಪ್ರದೇಶದಲ್ಲಿ ಕೋವಿಡ್ ಸೋಂಕಿತ ಅಂತ್ಯಕ್ರಿಯೆ ಮಾಡಿದ್ದು ಖಂಡನೀಯ. ಅದಕ್ಕೆಲ್ಲ ಸಂಬಂಧಪಟ್ಟ ವೈದ್ಯಾಧಿಕಾರಿಗಳೇ ಕಾರಣ. ಕೂಡಲೇ ಸ್ವತ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು.
ಕೂಡಲೇ ಆ ಪ್ರದೇಶದಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಹಾಗೂ ನಿರ್ಬೀತಿಯಿಂದ ಜನರು ಇರುವ ರೀತಿಯಲ್ಲಿ ವಾತಾವರಣ ನಿರ್ಮಾಣ ಮಾಡುವಂತೆ ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಸ್ಥೆಯ ಜಿಲ್ಲಾಧ್ಯಕ್ಷ ಸಂದೀಪಕುಮಾರ ಎಸ್. ಹತ್ತಿ, ಮಾಲಾ ಕಣ್ಣಿ, ಸಚಿನ ಕಡಗಂಚಿ, ಯೋಗೇಶ ಪಾಟೀಲ್, ಸಂತೋಷ ಪಾಟೀಲ್, ಗುರುಪಾದಯ್ಯ, ಪ್ರಜೋತ ಕದಂ, ರಾಘವೇಂದ್ರ ಮುಂತಾದವರು ಪಾಲ್ಗೊಂಡಿದ್ದರು.