ಕಲಬುರಗಿ: ಹೊರವಲಯದಲ್ಲಿರುವ ಕುಸನೂರು ಗ್ರಾಮದಲ್ಲಿ ಹೊಸದಾಗಿ ಎಂಎಸ್‌ಐಎಲ್ ಮದ್ಯ ಮಾರಾಟ ಮಾಡಲು ಅನುಮತಿ ನೀಡುವುದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಅಹಿಂದ ಚಿಂತಕರ ವೇದಿಕೆಯ ರಾಜ್ಯ ಖಜಾಂಚಿ ಸಂಜೀವ ಎಲ್. ಹೊಡಲಕರ ಅವರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಈಗಾಗಲೇ ಗ್ರಾಮದಲ್ಲಿ ಹೊಸದಾಗಿ ಎಂಎಸ್‌ಐಎಲ್ ಮದ್ಯದಂಗಡಿ ಪ್ರಾರಂಭಕ್ಕೆ ಪ್ರಯತ್ನಿಸಲಾಗುತ್ತಿದೆ. ಈ ಹಿಂದೆ ಈ ಕುರಿತು ಕುಸನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದಾಗ, ಮದ್ಯದಂಗಡಿ ಪ್ರಾರಂಭಕ್ಕೆ ಯಾವುದೇ ರೀತಿಯ ಅನುಮತಿ ನೀಡುವುದಿಲ್ಲ ಎಂದು ಭರವಸೆ ಕೊಟ್ಟಿದ್ದರು. ಆದಾಗ್ಯೂ, ಈಗ ಎಂಎಸ್‌ಐಎಲ್ ಲೈಸೆನ್ಸ್‌ದಾದರರು ರಾಜಕೀಯ ಪ್ರಭಾವ ಬೆಳೆಸಿ ಅದೇ ಸ್ಥಳದಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಶಿಫಾರಸ್ಸು ಮಾಡಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮದ್ಯದಂಗಡಿ ಪ್ರಾರಂಭಿಸುವ ಸ್ಥಳದ ಸಮೀಪವೇ ಶಾಲಾ, ಕಾಲೇಜುಗಳಿಗೆ, ಗುಲಬರ್ಗಾ ವಿಶ್ವವಿದ್ಯಾಲಯವಿದೆ. ನ್ಯಾಯಬೆಲೆ ಅಂಗಡಿ ಹಾಗೂ ಅಕ್ಕಪಕ್ಕ ಮನೆಗಳೂ ಇವೆ. ಸಾರ್ವಜನಿಕರು ಓಡಾಡುವ ಸ್ಥಳವಾಗಿರುವುದರಿಂದ ಆ ಸ್ಥಳದಲ್ಲಿ ಮದ್ಯದಂಗಡಿ ಪ್ರಾರಂಭಿಸಲು ಅನುಮತಿ ಕೊಟ್ಟರೆ ಅನೇಕ ರೀತಿಯ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸ ಮದ್ಯದಂಗಡಿ ಸ್ಥಾಪನೆಗೆ ಅವಕಾಶ ಕೊಡಬಾರದು. ಒಂದು ವೇಳೆ ಅನುಮತಿ ನೀಡಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಹೋರಾಟ ರೂಪಿಸಲಾಗುತ್ತದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ರವಿ ನಾಟೀಕಾರ, ರಾಹುಲ್ ಸೇಡಂಕರ, ಪೀರಪ್ಪ ತಳವಾರ, ಸೈಬಣ್ಣ ಜಮಾದಾರ ಮುಂತಾದವರು ಉಪಸ್ಥಿತರಿದ್ದರು.