ಸುರಪುರ: ಬಾದ್ಯಾಪುರ ಗ್ರಾಮವು ತಾಲೂಕು ಕೇಂದ್ರದಿಂದ ಸುಮಾರು ಹನ್ನೆರಡು ಕಿಲೋ ಮೀಟರ್ ದೂರದಲ್ಲಿದ್ದು ಗ್ರಾಮದ ಜನರು ಸರಕಾರಿ ಆಸ್ಪತ್ರೆಗಾಗಿ ಸುರಪುರ ನಗರಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ,ಆದ್ದರಿಂದ ಬಾದ್ಯಾಪುರ ಗ್ರಾಮದಲ್ಲಿ ಸರಕಾರಿ ಆರೋಗ್ಯ ಕೇಂದ್ರ ನಿರ್ಮಿಸಲು ಬಾದ್ಯಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧರ್ಮರಾಜ ಬಡಿಗೇರ ಒತ್ತಾಯಿಸಿದ್ದಾರೆ.
ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಹಾಗು ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಪತ್ರ ಬರೆದು ವಿನಂತಿಸಿರುವ ಅವರು,ಬಾದ್ಯಾಪುರ ಗ್ರಾಮ ಪಂಚಾಯತಿಗೆ ನಾಲ್ಕು ಹಳ್ಳಿಗಳಿದ್ದು ಸುಮಾರು ಹತ್ತು ಸಾವಿರ ಜನರು ಈ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ.ಆದರೆ ಇಲ್ಲಿಯ ಎಲ್ಲಾ ಗ್ರಾಮದ ಜನರಿಗೆ ತ್ವರಿತ ಚಿಕಿತ್ಸೆ ಬೇಕಾದರೆ ೧೨ ಕಿ.ಮೀ ದೂರದ ಸುರಪುರ ನಗರಕ್ಕೆ ಹೋಗಬೇಕಾಗಿದೆ.
ಅಲ್ಲದೆ ಯಾವುದೇ ಕಾಯಿಲೆ ಬಂದರು ಜನರು ಖಾಸಗಿ ವೈದ್ಯರ ಬಳಿಗೆ ಹೋಗಿ ದೊಡ್ಡ ಮೊತ್ತದ ಹಣ ಸುರಿಯಬೇಕಿದೆ.ಬಡ ಜನರು ಅನೇಕ ಬಾರಿ ಹಣವಿಲ್ಲದೆ ಚಿಕಿತ್ಸೆಗಾಗಿ ಪರದಾಡಿದ ಘಟನೆಗಳು ನಡೆದಿವೆ.ಆದ್ದರಿಂದ ನಮ್ಮ ಬಾದ್ಯಾಪುರ ಗ್ರಾಮಕ್ಕೆ ಸರಕಾರಿ ಆಸ್ಪತ್ರೆ ಮಂಜೂರು ಮಾಡುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಸರಕಾರ ನೆರವಾಗಬೇಕೆಂದು ಅವರು ವಿನಂತಿಸಿದ್ದಾರೆ.