ಕಲಬುರಗಿ: ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಕೆಲಸವನ್ನು ಪುನರ್ ವಿಮರ್ಶಿಸುವ ಕಮಿಟಿಯನ್ನು ಹಿಂಪಡೆದು, ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ನೌಕರರ ಸಂಘ (ಸಿಐಟಿಯು) ತಾಲ್ಲೂಕು ಸಮೀತಿ ಪದಾಧಿಕಾರಿಗಳು ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ೬೦೨೪ ಗ್ರಾಮ ಪಂಚಾಯಿತಿಗಳಿದ್ದು, ಜನರಿಗೆ ಕಿರು ನೀರು ಸರಬರಾಜು, ಕೊಳವೆಬಾವಿ ನೀರು ಸರಬರಾಜು ಸೇರಿದಂತೆ ೭೩ ಸಾವಿರ ನೀರು ಸರಬರಾಜು ಸ್ಥಾವರಗಳಿವೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ‍್ಕಾರಗಳು ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿವೆ. ನೌಕರರು ರಜೆ ಪಡೆಯದೇ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಪುನರ್ ವಿಮರ್ಶೆ ಕಮಿಟಿ ಆದೇಶವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಪ್ರತಿ ಗ್ರಾಮ ಪಂಚಾಯಿತಿಗೆ ನೀರು ಸರಬರಾಜು ಮಾಡಲು ಪಂಪ್ ಆಪರೇಟರ್ ನೇಮಕ ಮಾಡಿಕೊಳ್ಳುವಂತೆ ೨೦೧೨ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದಂತೆ ೩೪,೫೮೭ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಿತದೃಷ್ಟಿಯಿಂದ ಈ ಆದೇಶವನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿದ್ದಾರೆ.
ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ, ಖಜಾಂಚಿ ಶಿವಾನಂದ ಕವಲಗಾ(ಬಿ), ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ ಹರಸೂರ, ಪ್ರಧಾನ ಕಾರ್ಯದರ್ಶಿ ಉಮಾಶಂಕರ ಕಡಣಿ, ಜೈಭೀಮ, ರಾಜಶೇಖರ, ಬೀಮಾಶಂಕರ, ದೇವಿಂದ್ರ, ರೇವಣಸಿದ್ದಪ್ಪ, ಮಹಾಂತೇಶ, ಶಾಂತಯ್ಯ ಸ್ವಾಮಿ ಇದ್ದರು.