ಶಹಾಬಾದ:ನಗರದ ಜಿಇ ಕಾಲೋನಿಯ ಜನರಿಗೆ ಶುದ್ಧ ನೀರು ಪೂರೈಸಬೇಕು. ಕಾಲೋನಿಯ ಸ್ವಚ್ಛತೆ ಕಾಪಾಡಬೇಕೆಂದು ಆಗ್ರಹಿಸಿ ಅಲಸ್ಟಾಂ ನಿವೃತ್ತ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅಲಸ್ಟಾಂ ನಿವೃತ್ತ ನೌಕರರ ಸಂಘದ ಅಧ್ಯಕ್ಷ ದೇವೆಂದ್ರ ಗಾಯಕವಾಡ ಮಾತನಾಡಿ, ನಿವೃತ್ತ ನೌಕರರು ವಾಸಿಸುವ ಜಿಇ ಕಾಲೋನಿಯಲ್ಲಿ ಸುಮಾರು ಮೂರು ವರ್ಷಗಳಿಂದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ.ಇದರಿಂದ ಇಲ್ಲಿನ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ತಿಳಿಸಿದರೂ ಸಂಬಂಧಿಸಿದ ಜಿಇ ಕಾಲೋನಿಯ ಅಧಿಕಾರಿ ವರ್ಗದವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲದೇ ಕಾಲೋನಿಯಲ್ಲಿ ನಗರೋತ್ಥಾನದಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಒಳಚರಂಡಿ ವ್ಯವಸ್ಥೆ ಮಾಡಿದ್ದಾರೆ.ಅದನ್ನು ಇನ್ನೂ ಸಂಪರ್ಕಿಸುವ ಕೆಲಸ ಮಾಡದಿರುವುದರಿಂದ ಹಳೆ ಒಳ ಚರಂಡಿಗಳು ಹಾಳಾಗಿ ನೀರು ಹೊರಬಂದು ಗಬ್ಬು ವಾಸನೆ ಹರಡುತ್ತಿದೆ. ಎಲ್ಲಿ ನೋಡದರಲ್ಲಿ ಕಸ, ಹುಲ್ಲು, ಗಿಡಗಂಟಿಗಳು ಬೆಳೆದು ಕ್ರಿಮಿಕೀಟಗಳ ವಾಸಿಸಲು ಯೋಗ್ಯ ಸ್ಥಾನವಾಗಿದೆ.ಇದನ್ನು ಸ್ವಚ್ಛತೆ ಮಾಡಲು ಅನೇಕ ಬಾರಿ ಅಧಿಸೂಚಿತ ಕ್ಷೇತ್ರ ಸಮಿತಿಯ ಅಧಿಕಾರಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ. ಕೂಡಲೇ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರೋತ್ಥಾನದಲ್ಲಿ ನಿರ್ಮಿಸಿದ ಒಳಚರಂಡಿ ವ್ಯವಸೆಯನ್ನು ಹಳೆ ಚರಂಡಿಗೆ ಸಂಪರ್ಕಿಸಬೇಕು.ಕಾಲೋನಿಯ ಸ್ವಚ್ಛತೆ ಕಾಪಾಡಬೇಕು.ಇಲ್ಲದಿದ್ದರೇ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪೌರಾಯುಕ್ತ ಕೆ.ಗುರಲಿಂಗಪ್ಪ, ನಿವೃತ್ತ ನೌಕರರ ಸಂಘದ ಶಿವಶರಣಪ್ಪ ಜೆಟ್ಟೂರ್,ನಾಗರಾಜ ಸಿಂಘೆ, ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ್, ಭೀಮಾಶಂಕರ ದಂಡೋತಿ, ಅನಿಲ, ಲೇಖು,ಜಾವೀದ್, ವಿಲಿಯಮ್ಸ್, ಇತರರು ಇದ್ದರು.