ಆಳಂದ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ತಾಲೂಕಿನಲ್ಲಿ ನಿರಂತರವಾಗಿ ಭೀಕರ ಮಳೆ ಸುರಿಯುತ್ತಿದೆ ಇದರಿಂದ ಅನೇಕ ಕಡೆ ರಸ್ತೆ, ಸೇತುವೆಗಳು ಹಾಳಾಗಿವೆ ಜೊತೆಗೆ ಬೆಳೆಗಳು ಹಾಳಾಗಿವೆ ಹಾಗೂ ಅನೇಕ ಮನೆಗಳಲ್ಲಿ ನೀರು ನುಗ್ಗಿ ಮನೆಗಳು ಬಿಳುವ ಸ್ಥಿತಿಯಲ್ಲಿವೆ ಅಧಿಕಾರಿಗಳು ಶೀಘ್ರ ಪರಿಶೀಲಿಸಿ ಜನಗಳಿಗೆ ಅನೂಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ತಾಲೂಕಿನ ಅಧಿಕಾರಿಗಳೊಂದಿಗೆ ನಿಯೋಗ ತೆಗೆದುಕೊಂಡು ತಾಲೂಕಿನ ಜಿಡಗಾ, ದರ್ಗಾಶಿರೂರ, ಮೋಘಾ(ಕೆ), ಅಲ್ಲಾಪುರ, ಕೆರೂರ, ಮಾದನ ಹಿಪ್ಪರ್ಗಾ, ಝಳಕಿ(ಬಿ), ಹಡಲಗಿ, ಚಲಗೇರಿ, ನಿಂಬಾಳ ಸೇರಿದಂತೆ ಅನೇಕ ಕಡೆ ಸಾಕ್ಷಾತ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಮಳೆಯಿಂದ ಕೆರೂರ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ರಸ್ತೆಗೆ ನಿರ್ಮಿಸಿದ ಸೇತುವೆಗಳು ಮಳೆಗೆ ಕೊಚ್ಚಿ ಹೋಗಿವೆ ಜನರ ಸಂಚಾರಕ್ಕಾಗಿ ಶೀಘ್ರದಲ್ಲಿಯೇ ಸೇತುವೆ ದುರಸ್ತಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಮಳೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ ಮೊದಲು ಆದ್ಯತೆಯ ಮೇಲೆ ರಸ್ತೆ, ಸೇತುವೆ ರೀಪೇರಿ ಕೆಲಸ ಮಾಡಬೇಕು ನಂತರ ಬೆಳೆಹಾನಿ, ಮನೆಹಾನಿ ಸಮೀಕ್ಷೆ ಕೈಗೊಂಡು ಜನರಿಗೆ ಪರಿಹಾರ ಒದಗಿಸಬೇಕು- ಸುಭಾಷ್ ಆರ್ ಗುತ್ತೇದಾರ, ಶಾಸಕರು, ಆಳಂದ.
ಜಿಡಗಾ ಗ್ರಾಮದ ಒಂದು ಸೇತುವೆ, ಮೋಘಾ(ಕೆ) ರಸ್ತೆ, ಕೆರೂರ ಸೇತುವೆ, ಮಾದನಹಿಪ್ಪರ್ಗಾ ಗ್ರಾಮದ ಸಂಪರ್ಕ ಸೇತುವೆ, ಚಲಗೇರಿ ಗ್ರಾಮ ಸಂಪರ್ಕಿಸುವ ಖಾಸಾ ಹಳ್ಳದ ಸೇತುವೆ, ನಿಂಬಾಳ ಗ್ರಾಮದ ಕೆರೆ ಹಾಗೂ ನಿಂಬಾಳದ ರೈತರೊಬ್ಬರು ಹೊಲದಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು ಅದರ ಕುರಿತು ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ನಿಯೋಗದಲ್ಲಿ ತಹಸೀಲ್ದಾರ ದಯಾನಂದ ಪಾಟೀಲ, ಲೋಕೋಪಯೋಗಿ ಇಲಾಖೆ ಈರಣ್ಣ ಕುಣಗೇರಿ, ಪಂಚಾಯತ ರಾಜ ಇಲಾಖೆಯ ಮಲ್ಲಿಕಾರ್ಜುನ ಕಾರಭಾರಿ, ತೋಟಗಾರಿಕಾ ಇಲಾಖೆಯ ಸುರೇಂದ್ರನಾಥ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಜಾಧವ, ಪೊಲೀಸ್ ಇಲಾಖೆಯ ಇಂದುಮತಿ, ತಿರುಮಲೇಶ, ಜೆಸ್ಕಾಂ ಅಧಿಕಾರಿಗಳು ಇದ್ದರು.
ಸಮೀಕ್ಷೆಯ ಸಂದರ್ಭದಲ್ಲಿ ಮಾದನ ಹಿಪ್ಪರ್ಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಾ.ಪಂ ಸದಸ್ಯರಾದ ಸಾತಪ್ಪ ಕೋಳಶೆಟ್ಟಿ, ಬಸವರಾಜ ಸಾಣಕ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೋರಳ್ಳಿ, ಪ್ರ. ಕಾರ್ಯದರ್ಶಿಗಳಾದ ಶರಣು ಕುಮಸಿ, ಪ್ರಕಾಶ ಮಾನೆ, ಮುಖಂಡರಾದ ಲಿಂಗರಾಜ ಪಾಟೀಲ ಝಳಕಿ(ಬಿ), ಸಿದ್ದಾರಾಮ ತೋಳನೂರ, ಲಿಂಗರಾಜ ಉಡಗಿ, ಬಸವರಾಜ ಶಾಸ್ತ್ರಿ, ಕಾಶಿನಾಥ ಪಾಟೀಲ, ರಮೇಶ ಮೂಲಗೆ, ರಮೇಶ ಪಾಟೀಲ ಚಲಗೇರಾ, ಕಲ್ಯಾಣಿ ಭಾಗೆಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.