ಫೇಸ್‍ಬುಕ್, ಯೂಟ್ಯೂಬ್‍ ಲೈವ್ ಮೂಲಕ ಕಲ್ಯಾಣ ಕರ್ನಾಟಕ ಉತ್ಸವ ಸಂಭ್ರಮ: ಕಲಬುರಗಿ ಡಿಸಿ

0
29

ಕಲಬುರಗಿ: ಈ ಭಾಗದ ಪ್ರಮುಖವಾಗಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯನ್ನು ಜಿಲ್ಲೆಯಾದ್ಯಂತಹ ಇದೇ ಸೆಪ್ಟೆಂಬರ್ 17ರಂದು ಸಂಭ್ರಮದಿಂದ ಆಚರಿಸಬೇಕು. ಜೊತೆಗೆ ಕೋವಿಡ್-19 ಹಿನ್ನೆಲೆಯಲ್ಲಿ ಅಷ್ಟೇ ಜಾಗರೂಕತೆ ಕ್ರಮಗಳನ್ನು ಕೈಗೊಳ್ಳÀಬೇಕು ಎಂದು ಕಲಬುರಗಿ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಮಾರಂಭ ಕಲಬುರಗಿ ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಹೆಚ್ಚು ಜನ ಸೇರಿಸಬಾರದು. ಆದರೆ, ಕಾರ್ಯಕ್ರಮ ವೀಕ್ಷಿಸುವ ಸೌಭಾಗ್ಯ ಎಲ್ಲರಿಗೂ ದೊರಕುವಂತಾಬೇಕು ಎಂದ ಅವರು, ಫೇಸ್‍ಬುಕ್, ಯೂ ಟ್ಯೂಬ್ ಹಾಗೂ ಟೀವಿ ಚಾನೆಲ್‍ಗಳಲ್ಲಿ ನೇರಪ್ರಸಾರ ಮಾಡಲಾಗುವುದು. ಸಾರ್ವಜನಿಕರು ತಾವಿದ್ದಲ್ಲಿಯೇ ನೇರವಾಗಿ ಕಾರ್ಯಕ್ರಮ ವೀಕ್ಷಿಸಬಹುದು ಎಂದು ತಿಳಿಸಿದರು.

ಸಮಾರಂಭದ ವೇದಿಕೆ ಅದ್ಭುತವಾಗಿ ಮೂಡಿಬರಬೇಕು. ಹೂದಾನಿಗಳಿಂದ ವೇದಿಕೆ ಅಲಂಕಾರಗೊಳಿಸಬೇಕು. ಈ ಸಂಬಂಧ ತೋಟಗಾರಿಕಾ ಇಲಾಖೆ ಅಧಿಕಾರಿಗಳು ನೀಲಿನಕ್ಷೆ ತಯಾರಿಸಿ, ಎರಡು ದಿನದೊಳಗಾಗಿ ಅದಕ್ಕೆ ಒಪ್ಪಿಗೆ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

ಕಾರ್ಯಕ್ರಮದ ದಿನದಂದು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಅಲಂಕಾರ ಮಾಡಬೇಕು. ಹಾಗೂ ಗಣ್ಯರು ಪ್ರತಿಮೆಗೆ ಹೂಮಾಲೆ ಹಾಕುವುದಕ್ಕಾಗಿ ಮೆಟ್ಟಿಲುಗಳ ವ್ಯವಸ್ಥೆ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ತಿಳಿಸಿದರು.

ಹೈದ್ರಾಬಾದ್ ಕರ್ನಾಟಕ ವಿಮೋಚನೆಗಾಗಿ ಹೋರಾಡಿದ ಯೋಧರನ್ನು ಕಾರ್ಯಕ್ರಮ ನಡೆಯುವ ಡಿಎಆರ್ ಗ್ರೌಂಡ್‍ನಲ್ಲಿ ಸನ್ಮಾನಿಸಲು ಕ್ರಮವಹಿಸಬೇಕು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಈ ಹಿರಿಯ ನಾಗರಿಕರ ಬಗ್ಗೆ ತುಂಬಾ ಜಾಗ್ರತೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಜನಪ್ರತಿನಿಧಿಗಳು, ಸ್ವಾತಂತ್ರ್ಯ ಯೋಧರು, ನ್ಯಾಯಮೂರ್ತಿಗಳು, ಅಧಿಕಾರಿಗಳು ಮುಂತಾದವರನ್ನು ಶಿಷ್ಟಾಚಾರದ ಪ್ರಕಾರ ದಿನಾಚರಣೆ ಸಮಾರಂಭಕ್ಕೆ ಆಹ್ವಾನಿಸಬೇಕು ಎಂದು ಹೇಳಿದರು.

ಮಳೆ ಬಂದರೂ ಕಾರ್ಯಕ್ರಮ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗಬಾರದು. ಈ ಹಿನ್ನೆಲೆಯಲ್ಲಿ ವಾಟರ್ ಪ್ರೂಫ್ ಶಾಮಿಯಾನ ಹಾಕಿಸಬೇಕು. ಈ ಸಂಬಂಧ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಯಾರಿ ಮಾಡಿಕೊಳ್ಳಬೇಕು. ದೀಪಾಲಂಕಾರ, ಧ್ವನಿವರ್ಧಕ, ಆಸನ ವ್ಯವಸ್ಥೆ, ವೇದಿಕೆ ಅಲಂಕಾರ ಮುಂತಾದವುಗಳ ಸಿದ್ಧತೆಗಳನ್ನು ಕಾರ್ಯಕ್ರಮದ ಮುನ್ನಾದಿನ ಸೆಪ್ಟೆಂಬರ್ 16ರಂದು ಸಂಜೆ ಮುಗಿಸಿರಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ಸಮಿತಿಯ ಹಲವು ಸದಸ್ಯರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದು, ವೇದಿಕೆಯ ಒಂದು ಬದಿಯಲ್ಲಿ ಪ್ರತೇಕವಾಗಿ ಆಸನ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.

ಕಾರ್ಯಕ್ರಮ ಸ್ಥಳದಲ್ಲಿ ಅಗ್ನಿಶಾಮಕ ವಾಹನ, ಅಂಬ್ಯುಲೆನ್ಸ್ ವಾಹನಗಳ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಸ್ಥಳದಲ್ಲಿ ಜನ ಗುಂಪುಗೂಡದಂತೆ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

ಶಾಲಾಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಜೊತೆಗೆ ಜಿಲ್ಲೆಯ ಆಯಾ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರೇ ಧ್ವಜಾರೋಹಣ ಮಾಡಬೇಕು. ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಿದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಡಿಎಆರ್ ಮೈದಾನದಲ್ಲಿ ನಡೆಯುವ ಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಸೂಚಿಸಿದರು.

ಕಾರ್ಯಕ್ರಮದ ಮುನ್ನಾದಿನ ಸರ್ಕಾರಿ ಕಟ್ಟಡಗಳೆಲ್ಲ ದೀಪಾಲಂಕೃತ ಮಾಡಿರಬೇಕು ಎಂದು ತಿಳಿಸಿದ ಅವರು, ಹೆಚ್‍ಕೆಸಿಸಿಐ ಸೇರಿದಂತೆ ಖಾಸಗಿ ವಾಣಿಜ್ಯ ಮಳಿಗೆಗಳು ಕೂಡ ಅಂದು ವಿದ್ಯುದಾಲಂಕಾರ ಮಾಡಬೇಕು ಎಂದು ಕೋರಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಪಿ. ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಂ ಜಾರ್ಜ್, ಡಿಸಿಪಿ ಕಿಶೋರ್ ಬಾಬು, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ತುಕಾರಾಂ ಪಾಂಡ್ವೆ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ ಇದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಶಿಲ್ ನಮೋಶಿ, ಅಮರ್‍ನಾಥ್ ಪಾಟೀಲ್, ಡಾ. ಶಿವರಾಜ್ ಪಾಟೀಲ್, ಲಕ್ಷ್ಮಣ ದಸ್ತಿ, ಮನೀಷ್ ಜಾಜು ಸೇರಿದಂತೆ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಸಮಿತಿ ಸದಸ್ಯರು ಹಾಗೂ ಇನ್ನಿತರರು ಸಭೆಯಲ್ಲಿ ಹಾಜರಿದ್ದು, ಕಾರ್ಯಕ್ರಮದ ಯಶಸ್ವಿಗೆ ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here