ಕಲಬುರಗಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವರನ್ನು ನಿರ್ಲಕ್ಷಿಸುವುದು ಸಲ್ಲ. ಮಾನಸಿಕ ಕಾಯಿಲೆ ರೋಗವೆಂದು ಪರಿಗಣಿಸಿ ಖಿನ್ನತೆಯಿಂದ ಬಳಲುತ್ತಿರುವುವವರಿಗೆ ಆಪ್ತ ಸಮಾಲೋಚನೆ ಮತ್ತು ಸೂಕ್ತ ಉಪಚಾರ ನೀಡಿದಲ್ಲಿ ಅವರನ್ನು ಗುಣಪಡಿಸಬಹುದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಡಾ.ಶಿವಾನಂದ ಸುರಗಾಳಿ ಹೇಳಿದರು.
ಗುರುವಾರ ಇಲ್ಲಿನ ಹೆಚ್.ಐ.ಟಿ. ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜರುಗಿದ “ವಿಶ್ವ ಆತ್ಮಹತ್ಯ ತಡೆಗಟ್ಟುವ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಅವಿಭಕ್ತ ಕುಟಂಬದ ಜೀವನ ಶೈಲಿಯಲ್ಲಿ ಯಾವುದೇ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಯಾದಾಗ ಹಿರಿಯರು, ಕುಟುಂಬಸ್ಥರು ಸಂತೈಸುವ ಉತ್ತಮ ಮಾರ್ಗದರ್ಶಕಗಳಾಗಿದ್ದರು. ಆಧುನಿಕ ಜೀವನ ಶೈಲಿ, ಕೆಲಸದ ಒತ್ತಡ ಮತ್ತು ಪ್ರತ್ಯೇಕ ವಾಸದ ಜೀವನ ಶೈಲಿಯಿಂದ ಒಂಟಿತನ, ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ಕಾಣಬಹುದಾಗಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ವ್ಯಕ್ತಿ ಆತ್ಮಹತ್ಯೆಗೆ ಒಳಗಾಗದಲ್ಲಿ ಆತನ ಇಡೀ ಕುಟುಂಬದ ಜೀವನವೇ ಕಳೆದುಕೊಂಡಂತಾಗುತ್ತದೆ ಎಂದರು.
ವಿಶ್ವದಲ್ಲಿ ಪ್ರತಿ 40 ಸೆಕೆಂಡ್‍ಗೆ ಒಬ್ಬರಂತೆ ಆತ್ಮಹತ್ಯೆಗೆ ಬಲಿಯಾಗುತ್ತಿದ್ದಾರೆ. ಭಾರತದಲ್ಲಿ ಪ್ರತಿ 1 ಲಕ್ಷದ ಜನಸಂಖ್ಯೆಗೆ 11 ರಿಂದ 12 ಜನರು ಇದಕ್ಕೆ ಬಲಿಯಾಗುತ್ತಿದ್ದರೆ, ಕರ್ನಾಟಕದಲ್ಲಿ ಇದರ ಸಂಖ್ಯೆ 17-18 ರಷ್ಟಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬೆಂಗಳೂರು ವಿಭಾಗದ ಉಪನಿರ್ದೇಶಕ ಡಾ.ವಿಜಯಕುಮಾರ ಮಾತನಾಡಿ ಇತ್ತೀಚಿಗೆ ಶಾಲಾ-ಕಾಲೇಜು ಮಕ್ಕಳು ಮತ್ತು ಯುವ ಸಮೂಹ ಆತ್ಮಹತ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣವಾದರು ಪ್ರಾಣ ಕಳೆದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುವ ಶಿಕ್ಷಕರು ಆಪ್ತ ಸಮಾಲೋಚನೆ ಮೂಲಕ ಮಕ್ಕಳ ಮತ್ತು ವಿದ್ಯಾರ್ಥಿಗಳನ್ನು ಆತ್ಮಹತ್ಯೆಯಿಂದ ತಡೆಗಟ್ಟಬಹುದಾಗಿದೆ ಎಂದರು.
ಜಿಲ್ಲಾ ಆರ್.ಸಿ.ಹೆಚ್.ಓ. ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್ ಮತನಾಡಿ ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ 24 ಗಂಟೆ ನಾವೆಲ್ಲರು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಆರೋಗ್ಯ ಸಿಬ್ಬಂದಿಗಳು ಮತ್ತು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ನೌಕರರು ದೈಹಿಕ ಮತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. 365 ದಿನಗಳ ಕಾಲ ವೈದ್ಯ ಮತ್ತು ಆರೋಗ್ಯ ಸಿಬ್ಬಂದಿಗಳು ವಾರಿಯರ್ರ್ಸ್‍ಗಳಾಗಿಯೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಒತ್ತಿ ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರಾಜಕುಮಾರ ಕುಲಕರ್ಣಿ ಮಾತನಾಡಿ ಸಂಖ್ಯೆವಾರು ಪ್ರಮಾಣ ನೋಡಿದರೆ ಪುರುಷರು ಮಹಿಳೆಯರಿಗಿಂತ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಾರೆ. ಮಹಿಳೆಯರು ಆತ್ಮಹತ್ಯೆಗೆ ಹೆಚ್ಚು ಪ್ರಯತ್ನಿಸುತ್ತಾರೆ. ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿ ತಾಲೂಕ ಆಸ್ಪತ್ರೆಯಲ್ಲಿ ಮೊದಲನೇ ಮತ್ತು ಎರಡನೇ ಮಂಗಳವಾರದಂದು ಮನೋಚೈತನ್ಯ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಮಾನಸಿಕ ಅಸ್ವಸ್ಥರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಬಹುದು ಎಂದರು.
ಮನೋವೈದ್ಯರಾದ ಡಾ.ಶ್ರೀಕಾಂತ ಮತ್ತು ಡಾ.ಸುಧಾರಾಣಿ ಅವರು ಆತ್ಮಹತ್ಯೆ ತಡೆಗಟ್ಟುವ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ಶಿಕ್ಷಕರು, ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಆಪ್ತ ಸಮಾಲೋಚಕಿ ಸಂತೋಷಿ ಎಂ. ಗೊಳೆ ಸ್ವಾಗತಿಸಿದರು. ನಾಗರಾಜ ಬಿರಾದರ ವಂದಿಸಿದರು. ರೇಖಾ ಪ್ರಾರ್ಥನೆಗೈದರು.