ಶಹಾಪುರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಶನಿವಾರ ಶಹಾಪುರ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಮೇಗಾ ಈ ಲೋಕ್-ಅದಾಲತ್ ಕಾರ್ಯಕ್ರಮದಲ್ಲಿ 299 ಪ್ರಕರಣಗಳನ್ನು ಇತ್ಯಾರ್ಥಪಡಿಸಲಾಗಿದೆ ಎಂದು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಶಹಾಪುರ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಸಿವಿಲ್, ಕ್ರಿಮಿನಲ್ ಇನ್ನಿತರ ಪ್ರಕರಣ ಸೇರಿದಂತೆ 50 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯಾರ್ಥಪಡಿಸಲಾಗಿದೆ. ಅದರಂತೆ ಜೆಎಂಎಫ್ ನ್ಯಾಯಾಲಯದಲ್ಲಿ 160 ಪ್ರಕರಣಗಳು ಹಾಗೂ ಹೆಚ್ಚುವರಿ ಜೆಎಂಎಫ್ ನ್ಯಾಯಾಲಯದಲ್ಲಿ 89 ಪ್ರಕರಣಗಳನ್ನು ಇತ್ಯಾರ್ಥಪಡಿಸಲಾಗಿದೆ.
ಬೆಳಿಗ್ಗೆ ಎಸ್ಒಪಿ ಮಾರ್ಗಸೂಚಿ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ ಕಕ್ಷಿದಾರ ಜೊತೆ ವಿಡಿಯೋ ಕಾನ್ಸರೇನ್ಸ್ ನಡೆಸಿ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲಾಯಿತು ಎಂದು ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರವು ಪ್ರಕಟಣೆಯ ಮೂಲಕ ತಿಳಿಸಿದೆ.