ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಬಿ.ಎಂ ಕಾವಲ್ ಗ್ರಾಮದ ಸರ್ವೆ ನಂ.೩, ಮೂಲತಃ ಸರ್ಕಾರಿ ಜಮೀನಾಗಿದ್ದು, ಈ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ, ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ಜಮೀನನ್ನು ಪೋಡಿ ದುರಸ್ತಿ ಮಾಡಿಕೊಡುವ ಮುಖೇನ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಕೋಟ್ಯಾಂತರ ರೂ.ಗಳ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿಯವರ ಪಾಲಾಗುವಂತೆ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಬಗ್ಗೆ ಕಂದಾಯ ಇಲಾಖೆಯ ಹಾಗೂ ಭೂಮಾಪನ ಇಲಾಖೆಯ ಕೆಲ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಭೂಮಾಪನ ಇಲಾಖೆಯ ಕೆಲ ಅಧಿಕಾರಿಗಳು ತಯಾರಿಸಿದ ದಾಖಲೆಗಳು, ಅಕ್ರಮ ದಾಖಲೆಗಳೆಂದು ಕಂಡು ಬಂದಿದ್ದರೂ ಸಹ, ಇವುಗಳನ್ನು ಬಳಸಿಕೊಂಡು ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಕಾನೂನು ಬಾಹಿರವಾಗಿ ಸರ್ಕಾರಿ ಆಸ್ತಿಯನ್ನು ಮಂಜೂರಾತಿ ಮತ್ತು ಪೂರಕ ದಾಖಲೆಗಳಿಲ್ಲದೇ ಇದ್ದರೂ ನಿರಾಧಾರವಾದ ದಾಖಲೆಗಳೆಂದು ಪರಿಗಣಿಸಿ ಸುಮಾರು ೧೮ ಎಕರೆ ಸರ್ಕಾರಿ ಜಮೀನನ್ನು ಖಾಸಗಿಯವರ ಹೆಸರಿಗೆ ಪ್ರತ್ಯೇಕ ಪಹಣಿಯನ್ನು ಸೃಷ್ಟಿಸಿ, ಮಾರಾಟ ಮಾಡಲು ನೇರವಾಗಿ ಸಹಕರಿಸಿರುತ್ತಾರೆ.
ಈ ಮೂಲಕ ಕೆಲ ಕಂದಾಯ ಅಧಿಕಾರಿಗಳು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾಹಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟುವುಂಟು ಮಾಡಿರುವ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಭೂದಾಖಲೆಗಳ ಜಂಟಿ ನಿರ್ದೇಶಕರು ನೀಡಿದ ದೂರಿನ ಮೇರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.
ಪ್ರಕರಣದ ತನಿಖಾ ಕಾಲದಲ್ಲಿ ಕೆಲ ಅಧಿಕಾರಿಗಳು ಭೂಸುಧಾರಣೆ ಕಾಯ್ದೆ ನಿಯಮಗಳನ್ನು ಪಾಲಿಸದೇ ಕೆಲಸ ನಿರ್ವಹಿಸಿರುವುದು ಮತ್ತು ತಮ್ಮ ಕಾರ್ಯ ವ್ಯಾಪ್ತಿ ಮೀರಿ ಕರ್ತವ್ಯ ನಿರ್ವಹಿಸಿರುವುದು ಕಂಡು ಬಂದಿರುತ್ತದೆ.
ಈ ದಿನ ದಿನಾಂಕ: ೨೨/೦೯/೨೦೨೦ ರಂದು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ಠಾಣೆಯ ವಿವಿಧ ತಂಡಗಳಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪಾದಿತ ಅಧಿಕಾರಿಗಳ ಹಾಗೂ ಖಾಸಗಿ ವ್ಯಕ್ತಿಗಳ ಮನೆ ಮತ್ತು ಕಛೇರಿಗಳ ಮೇಲೆ ದಾಳಿ ನಡೆಸಲಾಗಿರುತ್ತದೆ. ಈವರೆಗೆ ಶೋಧನೆ ನಡೆಸಲಾದ ಸ್ಥಳಗಳ ಮಾಹಿತಿಯು ಈ ಕೆಳಕಂಡಂತೆ ಇರುತ್ತದೆ.
ಉಮೇಶ್, ಭೂಮಾಪಕರು, ಬೆಂಗಳೂರು ದಕ್ಷಿಣ ತಾಲ್ಲೂಕು ಇವರ ಬೆಂಗಳೂರು ನಗರದ ನಾಗರಭಾವಿ ೨ನೇ ಹಂತದಲ್ಲಿನ ವಾಸದ ಮನೆ. ಉಮೇಶ್, ಭೂಮಾಪಕರು, ಇವರು ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ಪುರಂನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ. ಕಿಶೋರ್‌ಕುಮಾರ್, ಬಿಲ್ಡರ್ ಇವರ ನಗರ್ತರ ಪೇಟೆ, ವೇಣುಗೋಪಾಲಸ್ವಾಮಿ ದೇವಸ್ಥಾನದ ಹತ್ತಿರದ ಮನೆ ಮತ್ತು ಕಿಶೋರ್‌ಕುಮಾರ್, ಬಿಲ್ಡರ್ ಇವರಿಗೆ ಸಂಬಂಧಪಟ್ಟ ಜೆ.ಪಿ ನಗರ, ಅವಲಹಳ್ಳಿ ಗೊಟ್ಟಿಗೆರೆ ಮುಖ್ಯರಸ್ತೆಯಲ್ಲಿನ ಕಛೇರಿ.
ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಸ್ಥಳಗಳಲ್ಲಿ ಶೋಧನೆ ಕಾರ್ಯ ಕೈಗೊಂಡಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಪ್ರಕರಣದ ತನಿಖೆ ಮುಂದುವರೆದಿದೆ.