ಶಹಾಬಾದ: ಉತ್ತರ ಪ್ರದೇಶದ ಹತ್ರಾಸನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಮಂಗಳವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯ ಸದಸ್ಯ ಡಾ.ಮಲ್ಲೇಶಿ ಸಜ್ಜನ್,ಉತ್ತರ ಪ್ರದೇಶದ ಹತ್ರಾಸನಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾದ ಆರೋಪಿಗಳನ್ನು ಪ್ರಕರಣದಿಂದ ತಪ್ಪಿಸಲು ರಾತ್ರೋ ರಾತ್ರಿ ಮೃತ ದೇಹವನ್ನು ಕುಟುಂಬದವರಿಗೂ ನೀಡದೇ ಹೀನಾಯವಾಗಿ ಸುಟ್ಟುಹಾಕುವ ಮೂಲಕ ಧಾರ್ಮಿಕ ಸಂಪ್ರದಾಯಗಳನ್ನು ಬೂದಿ ಮಾಡಿದ ಅಲ್ಲಿನ ಸರಕಾರದ ಕ್ರಮ ಖಂಡನೀಯ.ಇದು ದೇಶದ ಎಲ್ಲರ ಆತ್ಮಸಾಕ್ಷಿಯನ್ನು ಕಲಕಿದೆ.ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿದ್ದರೂ ಅಲ್ಲಿನ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ರಾಮರಾಜ್ಯದಲ್ಲಿ ರಾವಣನ ಆಡಳಿತ ನಡೆಸುತ್ತಿದೆ.ಹೆಣ್ಣು ಮಕ್ಕಳಿಗೆ ದೇಶದಲ್ಲಿ ರಕ್ಷಣೆ ಇಲ್ಲ.ಈ ಸರಕಾರವನ್ನು ಮೊದಲು ಕಿತ್ತೊಗೆಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಯೋಗಿ ಆದಿತ್ಯನಾಥ ಸರಕಾರ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಈ ಸರಕಾರವನ್ನು ಕೂಡಲೇ ವಜಾಗೊಳಿಸಿ, ರಾಷ್ಟ್ರಪತಿಗಳು ತಮ್ಮ ಸುಪರ್ಧಿಗೆ ಪಡೆದುಕೊಳ್ಳಬೇಕು. ಆರೋಪಿಗಳನ್ನು ಕೂಡಲೇ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ಸುರೇಶ ಮೆಂಗನ ಮಾತನಾಡಿ,ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯನ್ನು ಇಂತಹ ಘಟನೆಗಳು ತೋರಿಸುತ್ತವೆ ಎಂದು ಟೀಕಿಸಿದರು. ಹಲವಾರು ದೊಡ್ಡ ಭಾಷಣಗಳ ಮೂಲಕ ಬೇಟಿ ಬಚಾವೂ, ಬೇಟಿ ಪಡಾವೋ ಎಂದು ಹೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಅದೇ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಮಹಿಳೆಯರ ಹಾಗೂ ಮಕ್ಕಳ ಘನತೆಯನ್ನು ಕಾಪಾಡುವಲ್ಲಿ ಸೋತು ಹೋಗಿವೆ ಎಂದು ಆರೋಪಿಸಿದರು.ಭಾರತೀಯ ಸಂಸ್ಕೃತಿಯ ಬಗ್ಗೆ ಮಹಿಳೆಯರ ಬಗ್ಗೆ ಹೇಳುವ ಸರಕಾರ ಈ ದೇಶದ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿಯನ್ನು ಹೊಂದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.ಜನರ ರಕ್ಷಣೆ ಮಾಡಬೇಕಾದ ಪೊಲೀಸರೇ ಅಲ್ಲಿ ಅಪರಾಧಿಗಳೋಂದಿಗೆ ನಿಂತಿರುವುದು ಅತ್ಯಂತ ನೋವು ತರಿಸುವಂತದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಬಸವರಾಜ ಮಯೂರ ಮತ್ತು ಭರತ್ ಧನ್ನಾ, ತಾಲೂಕಾ ಸಂಚಾಲಕ ಸುನೀಲ ಮೆಂಗನ್,ತಾಲೂಕಾ ಸಂಘಟನಾ ಸಂಚಾಲಕರಾದ ಶರಣಪ್ಪ ದೊಡ್ಡಮನಿ,ನಿಂಗಪ್ಪ ಕನಕನಹಳ್ಳಿ,ರಮೇಶ ಹುಗ್ಗಿ, ಭೀಮಾಶಂಕರ ಕಾಂಬಳೆ, ಶಾಮ ನಂದೂರಕರ್, ರಾಜು ನಾಟೇಕಾರ, ಮಹೇಶಕುಮಾರ ಕಾಂಬಳೆ, ಶ್ರೀಧರ ಕೊಲ್ಲೂರ್, ರಾಜು ನಾಟೇಕಾರ, ಖಜಾಂಚಿ ಚಂದ್ರಕಾಂತ ಉದಯಕರ್, ಲೋಹಿತ್ ಕಟ್ಟಿ, ರಾಮಣ್ಣ ಇಬ್ರಾಹಿಂಪೂರ, ನಾಗಪ್ಪ ರಾಯಚೂರಕರ್,ಜಗನ್ನಾಥ.ಎಸ್.ಹೆಚ್, ರಾಜೇಶ ಯನಗುಂಟಿಕರ್,ಪ್ರವೀಣ ರಾಜನ್ ಸೇರಿದಂತೆ ಕುರುಬ ಸಮಾಜದ ತಾಲೂಕಾಧ್ಯಕ್ಷ ಮಲ್ಕಣ್ಣ ಮುದ್ದಾ, ಕಸಾಪದ ಅಧ್ಯಕ್ಷ ಶರಣಗೌಡ ಪಾಟೀಲ, ಮಲ್ಲಿಕಾರ್ಜುನ ಪಟ್ಟಣಕರ್, ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು.