ಜೂನ್ ಅಂತ್ಯದೊಳಗೆ ಕಾಮಗಾರಿ ಆರಂಭಿಸಿ, ಇಲ್ಲದಿದ್ದಲ್ಲಿ ಕಾಮಗಾರಿಗಳು ಡ್ರಾಪ್ ಮಾಡಲಾಗುವುದು

0
192

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕಳೆದ ೨-೩ ವರ್ಷಗಳಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಇದೂವರೆಗೂ ಆರಂಭಿಸದ ಕಾಮಗಾರಿಗಳು ಇದೇ ಜೂನ್ ಅಂತ್ಯಕ್ಕೆ ಪ್ರಾರಂಭಿಸಬೇಕು, ಇಲ್ಲದಿದ್ದಲ್ಲಿ ಅಂತಹ ಕಾಮಗಾರಿಗಳನ್ನು ಮಂಡಳಿಯಿಂದ ಕೈಬಿಡಲಾಗುವುದು ಎಂದು ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಸುಬೋಧ ಯಾದವ ಅವರು ಬೀದರ ಮತ್ತು ಯಾದಗಿರಿ ಜಿಲ್ಲೆಯ ಅನುಷ್ಠಾನ ಏಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಅವರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಯಾದಗಿರಿ ಮತ್ತು ಬೀದರ ಜಿಲ್ಲೆಯಲ್ಲಿ ಹೈ.ಕ.ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದರು.

Contact Your\'s Advertisement; 9902492681

ಬಹುತೇಕ ಅನುಷ್ಠಾನ ಏಜೆನ್ಸಿಗಳು ಭೌತಿಕ ಕಾಮಗಾರಿ ಮುಗಿದರು ಪಾವತಿಗೆ ಬಿಲ್ಲು ಸಲ್ಲಿಸಿರುವುದಿಲ್ಲ. ಭೌತಿಕ ಕಾಮಗಾರಿ ಮುಗಿದ ಕೂಡಲೇ ಬಿಲ್ಲು ಸಲ್ಲಿಸಿ ಇದರಿಂದ ಸರ್ಕಾರದ ಮಟ್ಟದಲ್ಲಿ ಆರ್ಥಿಕ ಪ್ರಗತಿಯ ಮಾಹಿತಿ ನೀಡಲು ಅನುಕೂಲವಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಗಾಗ ಜಿಲ್ಲೆಗಳಲ್ಲಿ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿ ಕಾಮಗಾರಿಗಳಿಗೆ ಇರುವ ತೊಡಕುಗಳನ್ನು ಜಿಲಾ ಹಂತದಲ್ಲಿಯೆ ನಿವಾರಿಸಬೇಕು ಎಂದರು.

ಅಂಗನವಾಡಿ ಕಟ್ಟಡ ಇರದ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸರ್ಕಾರದ ನಿರ್ದೇಶನವಿದ್ದು, ಅದರಂತೆ ಮಂಡಳಿಯು ಸಹ ಹೆಚ್ಚಿನ ಒತ್ತು ನೀಡಿದೆ. ಆದರೆ ಸ್ಥಳೀಯವಾಗಿ ಅಧಿಕಾರಿಗಳು ನಿವೇಶನ ಸೇರಿದಂತೆ ಇನ್ನೀತರ ಸಣ್ಣ-ಪುಟ್ಟ ಸಮಸ್ಯೆಗಳ ನೆಪೆವೊಡ್ಡಿ ಕಾಮಗಾರಿ ವಿಳಂಬ ಮಾಡುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾರ್ಯದರ್ಶಿಗಳು, ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಜಿಲ್ಲೆಯ ಡಿ.ಸಿ. ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ. ಬಳಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಬೇಕೆಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ನಿರ್ದೇಶನ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.

ಹೈ.ಕ.ಮಂಡಳಿಗೆ ವಾರ್ಷಿಕ ೧೦೦೦ ಕೋಟಿ ರೂ. ಗಳಿಂದ ೧೫೦೦ ಕೋಟಿ ರೂ.ಗಳಿಗೆ ಅನುದಾನ ಹೆಚ್ಚಿಸಲಾಗಿದೆ. ಅಧಿಕಾರಿಗಳು ಅಸಡ್ಡೆ, ನಿಧಾನಗತಿಯಿಂದ ಹೊರಬಂದು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಈ ಅನುದಾನ ವಿನಿಯೋಗಿಸಿಕೊಳ್ಳಬೇಕಾಗಿದೆ. ಸ್ಥಳೀಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸುವ ಅವಶ್ಯಕತೆಯಿದೆ ಎಂದರು.

ಯಾದಗಿರಿ ಮತ್ತು ಬೀದರ ಜಿಲ್ಲೆಗಳ ಲೋಕೋಪಯೋಗಿ, ನಿರ್ಮಿತಿ ಕೇಂದ್ರ, ಕೆ.ಆರ್.ಐ.ಡಿ.ಎಲ್, ಪಿಆರ್‌ಇಡಿ ಸೇರಿದಂತೆ ಇನ್ನೀತರ ಅನುಷ್ಠಾನ ಏಜೆನ್ಸಿಗಳ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು. ಸಭೆಯಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಎಂ.ಕುರ್ಮಾರಾವ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ, ಬೀದರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಮಹಾಂತೇಶ ಬೀಳಗಿ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಮಂಡಳಿಯ ಉಪಕಾರ್ಯದರ್ಶಿ ಡಾ.ಬಿ.ಸುಶೀಲಾ, ಜಂಟಿ ಕಾರ್ಯದರ್ಶಿ ಬಸವರಾಜ ಸೇರಿದಂತೆ ಯಾದಗಿರಿ ಮತ್ತು ಬೀದರ ಜಿಲ್ಲೆಗಳ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here