ಫೆಬ್ರುವರಿಯಲ್ಲಿ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ನೀಡಿಕೆ: ವಿ.ವಿ. ಜ್ಯೋತ್ಸ್ನಾ

0
111

ಕಲಬುರಗಿ: ಕೋವಿಡ್-19 ಸೋಂಕು ತಡೆಗಟ್ಟುವ ಲಸಿಕೆಯು ಮುಂದಿನ ವರ್ಷ ಫೆಬ್ರುವರಿ ಅಥವಾ ಮಾರ್ಚ್‍ನಲ್ಲಿ ಪರಿಚಯಿಸುವ ಸಾಧ್ಯತೆಯಿದ್ದು, ಮೊದಲ ಹಂತದಲ್ಲಿ ಈ ರೋಗದ ನಿರ್ಮೂಲನೆಗೆ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಜಿಲ್ಲೆಯ ವೈದ್ಯರು ಹಾಗೂ ಕೊರೋನಾ ವಾರಿಯರ್ಸ್‍ಗಳಿಗೆ ನೀಡಲಾಗುತ್ತದೆ ಎಂದು ಕೋವಿಡ್ -19 ಲಸಿಕೆ ಪರಿಚಯಿಸುವ ಜಿಲ್ಲಾ ಚಾಲನಾ ಸಮಿತಿಯ ನೋಡಲ್ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶ್ರೀಮತಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ನಡೆದ ಕೋವಿಡ್-19 ಲಸಿಕೆ ಪರಿಚಯಿಸುವ ಕುರಿತು ಪೂರ್ವ ಸಿದ್ಧತೆ ಹಾಗೂ ಅನುಷ್ಠಾನ ಕುರಿತ ಜಿಲ್ಲಾ ಚಾಲನಾ ಸಮಿತಿ(ಡಿಟಿಎಫ್)ಯ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು, ಪ್ರಯೋಗಾಲಯ ತಂತ್ರಜ್ಞರು, ದಾದಿಯರು, ಆಸ್ಪತ್ರೆಗಳ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್, ಗ್ರೂಪ್-ಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮುಂತಾದ ಕೊರೋನಾ ವಾರಿಯರ್ಸ್‍ಗಳಿಗೆ ಮೊದಲು ಲಸಿಕೆ ಹಾಕಲಾಗುತ್ತಿದೆ ಎಂದು ಅವರು ಹೇಳಿದರು.

ಜಿಮ್ಸ್ ಆಸ್ಪತ್ರೆ ವೈದ್ಯರು, ಖಾಸಗಿ ಕ್ಲಿನಿಕ್‍ಗಳ ವೈದ್ಯರು ಸೇರಿ ಎಲ್ಲಾ ಆರೋಗ್ಯ ಸಿಬ್ಬಂದಿಗಳ ಮಾಹಿತಿಯನ್ನು ಶುಕ್ರವಾರ (ನಾಳೆ) ಸಂಜೆ 5 ಗಂಟೆಯೊಳಗೆ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಮ್ಸ್ ಆಸ್ಪತ್ರೆ ನಿರ್ದೇಶಕರಿಗೆ ಸೂಚಿಸಿದರು. ಇನ್ನು ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿದ್ದು, ಇವರ ವಿವರಗಳನ್ನೂ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.

ಈ ಮಾಹಿತಿಯನ್ನು ಕೇಂದ್ರ ಸರ್ಕಾರ ಕೋವಿಡ್ ವ್ಯಾಕ್ಸಿನ್ ಬೆನಿಫಿಷಿಯರಿ ಮ್ಯಾನೇಜ್‍ಮೆಂಟ್ ಸಿಸ್ಟಮ್ ರಚಿಸಿದ್ದು, ಲಸಿಕೆ ಪರಿಚಯಿಸುವುದಕ್ಕಾಗಿ ಎಲ್ಲಾ ಸಿಬ್ಬಂದಿಯ ಮಾಹಿತಿಯನ್ನು ನಾಳೆ ಸಂಜೆಯೊಳಗೆ ಅಪ್‍ಲೋಡ್ ಮಾಡುವಂತೆ ಸೂಚಿಸಿದರು. ಲಸಿಕೆ ಪರಿಚಯಿಸುವ ಹಿನ್ನೆಲೆಯಲ್ಲಿ ಕೋವಿಡ್ ನಿರ್ಮೂಲನೆಯಲ್ಲಿ ಎಷ್ಟು ಮಂದಿ ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವುದೇ ಇದರ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು ಸೇರಿ 20 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರ ಮಾಹಿತಿಯನ್ನು ಕಳುಹಿಸಲಾಗುವುದು ಎಂದು ಅವರು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಅನಿಲ್ ತಾಳಿಕೋಟೆ ಅವರು ಪಿಪಿಟಿ ಪ್ರದರ್ಶನ ನೀಡಿ, ವಿಶ್ವದ 90 ರಾಷ್ಟ್ರಗಳು ಕೋವಿಡ್ ಲಸಿಕೆ ಕಂಡು ಹಿಡಿಯಲು ಒಕ್ಕೂಟವೊಂದನ್ನು ರಚಿಸಿಕೊಂಡಿವೆ. ಈ ಎಲ್ಲಾ ರಾಷ್ಟ್ರಗಳು ಬಂಡವಾಳ ಮತ್ತು ಸಿಬ್ಬಂದಿ ( ಮಾನವ ಸಂಪನ್ಮೂಲ) ಹಾಕಿ ಶ್ರಮಿಸುತ್ತಿದ್ದು, 248 ಮಾದರಿ (ಟ್ರಯಲ್) ಲಸಿಕೆ ಅಭಿವೃದ್ಧಿ ಪಡಿಸುತ್ತಿದ್ದು, ಇದರಲ್ಲಿ ಮೊದಲನೇ, 2ನೇ ಹಾಗೂ 3 ಹಂತದ ಲಸಿಕೆಗಳು ಎಂದು ವಿಭಾಗಿಸಲಾಗಿದೆ. ಮೂರನೇ ಹಂತದಲ್ಲಿ 9 ಲಸಿಕೆಗಳಿದ್ದು, ಈ ಪೈಕಿ ಕೆಲವು ಲಸಿಕೆಗಳಿಗೆ 2021 ಫೆಬ್ರುವರಿ-ಮಾರ್ಚ್‍ನಲ್ಲಿ ಮಾನ್ಯತೆ ಸಿಗುವ ಸಾಧ್ಯತೆ ಇದೆ ಎಂದು ವಿವರಿಸಿದರು.

ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪಿ. ರಾಜಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ. ಆಕಾಶ್ ಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಜಶೇಖರ್ ಎಸ್. ಮಾಲಿ, ಜಿಮ್ಸ್ ನಿರ್ದೇಶಕಿ ಶ್ರೀಮತಿ ಕವಿತಾ ಪಾಟೀಲ್, ಜಿಲ್ಲಾ ಸರ್ಜನ್ ಡಾ. ಎ.ಎಸ್. ರುದ್ರವಾಡಿ, ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಅಮೂಲ್ ಪತಂಗೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here