- ಜಿ.ಚಂದ್ರಕಾಂತ,
ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಸಂಗೊಳಗಿಯ 45 ವಯಸ್ಸಿನ ಸಣ್ಣ ರೈತ ವೆಂಕಟರಾವ ಬಿರಾದಾರ ಒಂದು ಎಕರೆಯಲ್ಲೇ ತರಹೇವಾರಿ ಹಣ್ಣು ತರಕಾರಿ ಬೆಳೆದು ವರ್ಷಕ್ಕೆ ಸುಮಾರು 5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಕಠಿಣ ಪರಿಶ್ರಮದಿಂದ ಅರ್ಧ ಎಕರೆಯಲ್ಲಿ ಬೆಳೆದ ಸೀತಾಫಲ ಹಣ್ಣಿನಿಂದ ಆರ್ಥಿಕತೆ ಬಲಪಡಿಸಿಕೊಂಡು ಇತರೆ ಸಣ್ಣ ರೈತರಿಗೆ ಮಾದರಿಯಾಗಿದ್ದಾರೆ.
ವೆಂಕಟರಾವ ಬಡತನದ ಪ್ರಯುಕ್ತ ಎಸ್.ಎಸ್.ಎಲ್.ಸಿ. ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿದರು. ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ, ತೋಟಗಾರಿಕೆ ಹಾಗೂ ಕೃಷಿ ತಂತ್ರಜ್ಞರ ಮಾರ್ಗದರ್ಶನದನ್ವಯ ಮಧ್ಯಮ ಫಲವತ್ತತೆಯ ತಮ್ಮ ಒಂದು ಎಕರೆ ಜಮೀನನ್ನು ಅಗತ್ಯಕ್ಕನುಗುಣವಾಗಿ ಮಾರ್ಪಡಿಸಿದರು. ತೋಟಗಾರಿಕೆ ಅಧಿಕಾರಿಯೊಬ್ಬರ ಪ್ರೇರಣೆಯಿಂದ ಸೀತಾಫಲ ಬೆಳೆಯಲು ನಿರ್ಧರಿಸಿ, ತೆಲಂಗಾಣಾ ರಾಜ್ಯದ ಸಂಗಾರೆಡ್ಡಿಯಿಂದ 2009ರಲ್ಲಿ ಬಾಲಾನಗರ ತಳಿಯ 125 ಸೀತಾಫಲ ಸಸಿಗಳನ್ನು ತಂದು ಅರ್ಧ ಎಕರೆಯಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 12×12 ಅಡಿ ಅಂತರದಲ್ಲಿ 25000 ರೂ. ವೆಚ್ಚದಿಂದ ನಾಟಿ ಮಾಡಿದರು. ಈ ಗಿಡಗಳು ಹುಲುಸಾಗಿ ಬೆಳೆದು ಮೂರು ವರ್ಷಕ್ಕೇ ಫಸಲು ನೀಡಲು ಪ್ರಾರಂಭಿಸಿದ್ದರಿಂದ ಮೊದಲನೇ ಫಸಲಿನ 31.25 ಕ್ವಿಂಟಾಲ್ ಮಾರಾಟದಿಂದ 1.09 ಲಕ್ಷ ರೂ. ಲಾಭ ಪಡೆದರು.
ನೀರಾವರಿಗಾಗಿ ಕೊಳವೆಬಾವಿಯಿದ್ದು, 2012ರಲ್ಲಿ ತೋಟಗಾರಿಕೆ ಇಲಾಖೆಯ ಶೇ.70ರ ಸಹಾಯಧನದಲ್ಲಿ ಹನಿ ನೀರಾವರಿಯನ್ನು ಅಳವಡಿಸಿಕೊಂಡಿದ್ದಾರೆ. ಸೀತಾಫ¯ದ ಪ್ರತಿ ಗಿಡಕ್ಕೆ ವರ್ಷಕ್ಕೊಂದು ಸಲ 20 ಕೆ.ಜಿ.ಯಂತೆ ತಿಪ್ಪೆಗೊಬ್ಬರ, ಜೂನ್-ಆಗಸ್ಟ್‍ನಲ್ಲಿ 3 ಕೆ.ಜಿ.ಯಂತೆ ಎನ್.ಪಿ.ಕೆ. ಗೊಬ್ಬರ, ಹದಿನೈದು ದಿನಕ್ಕೊಮ್ಮೆ ಒಂದು ಹಸುವಿನ ಸಗಣಿಯಿಂದ ತಯಾರಿಸಿದ ಜೀವಾಮೃತ, ಎಂಟು ದಿನಕ್ಕೊಮ್ಮೆ 10 ಗಿಡಗಳ ಎಲೆಗಳಿಂದ ತಯಾರಿಸಿದ ರಬಡಾ(ಕಷಾಯ) ಹಾಕುವರು. ಈ ಬೆಳೆಗೆ ಬೇಸಿಗೆಯಲ್ಲಿ ಐದಾರು ದಿನಕ್ಕೊಮ್ಮೆ, ಮಳೆಗಾಲದಲ್ಲಿ 15 ದಿನಕ್ಕೊಮ್ಮೆ ನೀರುಣಿಸುವರು.
ವರ್ಷಕ್ಕೊಂದು ಸಲ ಆಗಸ್ಟ್ 3ನೇ ವಾರದಿಂದ ಎರಡುವರೆ ತಿಂಗಳವರೆಗೆ ಪ್ರತಿ ಗಿಡದಿಂದ ಸರಾಸರಿ 50 ಕೆ.ಜಿ.ಯಂತೆ ಒಟ್ಟು 62 ಕ್ವಿಂಟಾಲ್ ಸೀತಾಫಲದ ಇಳುವರಿ ಪಡೆದು ಸರಾಸರಿ ಎರಡುವರೆ ಲಕ್ಷ ರೂ. ಗಳಿಸುತ್ತಿದ್ದಾರೆ. ಪ್ರಸಕ್ತ ವರ್ಷದ ಅತೀವೃಷ್ಟಿಯಿಂದ ಕೇವಲ 37 ಕ್ವಿಂಟಾಲ್ ಇಳುವರಿ ಬಂದಿದೆಯಾದರೂ ಮಾರಾಟ ಬೆಲೆ ಹೆಚ್ಚಿರುವುದರಿಂದ 2.50 ಲಕ್ಷ ರೂ. ಪಡೆದಿದ್ದಾರೆ.
ಇವರದು ಗುಣಮಟ್ಟದ ಸೀತಾಫಲ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಕೆ.ವಿ.ಕೆ ವಿಜ್ಞಾನಿಗಳ ಪ್ಯಾಕೇಜ್ ತಂತ್ರಜ್ಞಾನದನ್ವಯ ಸೀತಾಫಲ ಮಾಗುವ ಅವಧಿ ಪ್ರಕಾರ ವರ್ಗೀಕರಿಸುವರು. ಒಂದು ಬುಟ್ಟಿಯಲ್ಲಿ 30ರಂತೆ ಸೀತಾಫಲ ತುಂಬಿ ಪ್ರತಿ ಬುಟ್ಟಿಗೆ 750 ರೂ.ದಂತೆ ಕಲಬುರಗಿಯಲ್ಲೇ ಪೂನಾ, ಹೈದ್ರಾಬಾದ, ಕಲಬುರಗಿ ಮಾರಾಟಗಾರರು ಖರೀದಿಸುತ್ತಾರೆ. ಇದಲ್ಲದೆ ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರಿಗೂ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ. ಮುಂದಿನ ವರ್ಷ ತಮ್ಮದೇಯಾದ ಬ್ರ್ಯಾಂಡಿನಲ್ಲಿ ಸೀತಾಫಲ ಮಾರಾಟಕ್ಕೆ ಯೋಜಿಸಿದ್ದಾರೆ.
ಪ್ರಾರಂಭಿಕ ಹಂತದಿಂದಲೇ ಹವಾಮಾನ ಮತ್ತು ಮಾರುಕಟ್ಟೆಯಾಧಾರಿತ ಕೊತ್ತಂಬರಿ, ಪುದೀನಾ, ಮೆಂತ್ಯೆ, ಸಬ್ಬಸ್ಸಿಗೆ, ಫುಂಡಿ, ಪಾಲಕ್, ಈರುಳ್ಳಿ ಸೊಪ್ಪುಗಳನ್ನು, ಟೊಮ್ಯಾಟೋ, ಸೌತೆ, ಅವರೆ, ಹೂಕೋಸು ತರಕಾರಿಗಳನ್ನು ಅಂತರ ಬೆಳೆಯಾಗಿ ಬೆಳೆದು ವಾರ್ಷಿಕ ಎರಡೂವರೆ ಲಕ್ಷ ರೂ. ಪಡೆಯುತ್ತಿದ್ದಾರೆ. ಬದುಗಳ ಮತ್ತು ಜಮೀನು ಸುತ್ತಲೂ 40 ಕರಿಬೇವನ್ನು, 20 ನುಗ್ಗೆಯನ್ನು, ಉಳಿದರ್ಧ ಎಕರೆಯಲ್ಲಿ 200 ಆ್ಯಪ್ಪಲ್ ಬೆರ್, 7 ಸಪೋಟ, 5 ಮಾವು, 9 ನೇರಳೆ, 3 ನಿಂಬೆ, 2 ದಾಳಿಂಬೆ ಗಿಡಗಳನ್ನು ಬೆಳೆದಿದ್ದಾರೆ.
ಮಹಾರಾಷ್ಟ್ರದ ಮೊಹೊಳದಿಂದ 200 ಆ್ಯಪ್ಪಲ್ ಬೆರ್ ಸಸಿಗಳನ್ನು ಖರೀದಿಸಿ 2019ರಲ್ಲಿ ಸಾಲಿನಿಂದ ಸಾಲಿಗೆ ಹಾಗೂ ಗಿಡದಿಂದ ಗಿಡಕ್ಕೆ 11×12 ಅಡಿ ಅಂತರದಲ್ಲಿ 18000 ರೂ. ವೆಚ್ಚದಿಂದ ನಾಟಿ ಮಾಡಿದ್ದಾರೆ. ಇವು ಮುಂದಿನ ವರ್ಷದಿಂದ ಇಳುವರಿ ನೀಡಲಿವೆ. ಮೇವನ್ನೂ 15×80 ಅಡಿ ಜಾಗದಲ್ಲಿ ಬೆಳೆದಿದ್ದಾರೆ.
“ಒಕ್ಕಲುತನ ಮಾಡುವುದೆಂದರೇ ಮೂಗು ಮುರಿಯುವಂಥ ಜನರೇ ಹೆಚ್ಚು. ಭೂತಾಯಿಯನ್ನು ನಂಬಿ ಶ್ರದ್ಧಾಭಕ್ತಿಯಿಂದ ಹಗಲಿರುಳು ದುಡಿಯುತ್ತಿದ್ದುದರಿಂದ ಭೂತಾಯಿ ಒಲಿದು ನನ್ನ ಆರ್ಥಿಕಮಟ್ಟ ಗಣನೀಯವಾಗಿ ಸುಧಾರಿಸಿದೆ. ನನ್ನ ಪತ್ನಿ ಮತ್ತು ಇಬ್ಬರು ಗಂಡುಮಕ್ಕಳು ಕೃಷಿಕಾರ್ಯಗಳಲ್ಲಿ ನೆರವಾಗುತ್ತಿರುವುದರಿಂದ ಕೂಲಿಯಾಳು ಖರ್ಚಿಲ್ಲ. ಸೀತಾಫಲ ಮತ್ತಿತರೆ ಹಣ್ಣು ತರಕಾರಿಯಿಂದ ಹಸನಾದ ಸುಂದರ ಬದುಕನ್ನು ರೂಪಿಸಿಕೊಂಡಿದ್ದೇನೆ. ಎಲ್ಲ ರೈತರು ಸರ್ಕಾರದ ಸಹಾಯ ಸೌಲಭ್ಯ, ಕೃಷಿ ವಿಜ್ಞಾನಿಗಳ ಸಲಹೆಯಂತೆ ಮೈಮುರಿದು ದುಡಿದರೆ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು. ಇದಕ್ಕೂ ಮುನ್ನ ಮಳೆಯಾಧಾರಿತ ಕೃಷಿಯಿಂದ ತೀವ್ರ ಬಡತನ ಕಾಡುತ್ತಿತ್ತು. ಒಂದು ಹೊತ್ತಿನ ಊಟಕ್ಕೂ ಪರದಾಡುವಂಥ ಮತ್ತು ಉಪವಾಸ ಬೀಳುವಂಥ ಪರಿಸ್ಥಿತಿಯಿತ್ತು” ಎನ್ನುತ್ತಾರೆ ವೆಂಕಟರಾವ ಬಿರಾದಾರ. ಇವರ ಸಂಪರ್ಕ ಸಂಖ್ಯೆ 9740485727.